ADVERTISEMENT

ರೈತರ ಮೇಲೆ ‘ವ್ಯವಸ್ಥಿತ ದಾಳಿ’ನಡೆದಿದೆ: ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2021, 5:46 IST
Last Updated 6 ಅಕ್ಟೋಬರ್ 2021, 5:46 IST
ರಾಹುಲ್ ಗಾಂಧಿ: ಪಿಟಿಐ ಚಿತ್ರ
ರಾಹುಲ್ ಗಾಂಧಿ: ಪಿಟಿಐ ಚಿತ್ರ   

ನವದೆಹಲಿ: ನಾಲ್ವರು ರೈತರು ಸೇರಿ ಎಂಟು ಮಂದಿ ಸಾವಿಗೀಡಾದ ಉತ್ತರ ಪ್ರದೇಶದ ಲಖಿಂಪುರ್–ಖೇರಿ ಹಿಂಸಾಚಾರದಲ್ಲಿ ರೈತರ ಮೇಲೆ ‘ವ್ಯವಸ್ಥಿತ ದಾಳಿ’ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

‘ರೈತರನ್ನು ಜೀಪ್ ಮೂಲಕ ಕೆಳಗೆ ತಳ್ಳಿ ಕಾರು ಹತ್ತಿಸಿ ಹತ್ಯೆ ಮಾಡಲಾಗಿದೆ. ನಿನ್ನೆ ಪ್ರಧಾನಿ ಮೋದಿ ಲಖನೌಗೆ ಭೇಟಿ ನೀಡಿದ್ದರು. ಆದರೆ, ಅವರು ಲಖಿಂಪುರ್ ಖೇರಿಗೆ ಭೇಟಿ ನೀಡಲಿಲ್ಲ. ಇದು ರೈತರ ಮೇಲೆ ನಡೆಸಿರುವ ‘ವ್ಯವಸ್ಥಿತ ದಾಳಿ’ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

‘ಸರ್ಕಾರವು ರೈತರನ್ನು ಅವಮಾನಿಸುತ್ತಿದೆ. ಇದು ಅವರ ಕೆಟ್ಟ ಆಲೋಚನೆಯಾಗಿದೆ. ಕೆಲ ಸಮಯದಿಂದ ಸರ್ಕಾರವು ರೈತರ ಮೇಲೆ 'ದಾಳಿ' ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ADVERTISEMENT

ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುವುದು ಪ್ರತಿಪಕ್ಷಗಳ ಕೆಲಸ ಎಂದ ರಾಹುಲ್ ಗಾಂಧಿ, ‘ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಅದು ಕೆಲಸ ಮಾಡಿದೆ. ನಾವು ಕೃಷಿ ಕಾಯ್ದೆಯ ವಿಷಯದಲ್ಲಿಯೂ ಅದನ್ನೇ ಮಾಡಲು ಪ್ರಯತ್ನಿಸುತ್ತಿದ್ದೇವೆ, ಆದರೆ ಸರ್ಕಾರವು ನಮಗೆ ಅವಕಾಶ ನೀಡುತ್ತಿಲ್ಲ. ಈ ವಿಷಯವನ್ನು ಪ್ರಸ್ತಾಪಿಸುವುದು ನಿಮ್ಮ (ಮಾಧ್ಯಮ) ಜವಾಬ್ದಾರಿ, ಆದರೆ, ನಾವು ಪ್ರಶ್ನೆಗಳನ್ನು ಕೇಳಿದಾಗ, ನೀವು (ಮಾಧ್ಯಮ) ರಾಜಕೀಯ ಮಾಡುತ್ತಿದ್ದೀರಿ ಎಂದು ನಮಗೆ ಹೇಳುತ್ತೀರಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.