ಲಖನೌ: ನಾಲ್ಕು ದಶಕಗಳ ಹಿಂದಿನ ಭೂವಿವಾದಕ್ಕೆ ಸಂಬಂಧಿಸಿದಂತೆ, ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಬುಧವಾರ 17 ವರ್ಷದ ಟೇಕ್ವಾಂಡೊ ಆಟಗಾರನ ಶಿರಚ್ಛೇದ ಮಾಡಲಾಗಿದೆ.
ಕಬಿರುದ್ದೀನ್ ಗ್ರಾಮದ ಅನುರಾಗ್ ಯಾದವ್ ಹತ್ಯೆಯಾದವ.
ಈತನ ತಾಯಿಯು, ಕೊಲೆಯ ಬಳಿಕ ಮಗನ ಕತ್ತರಿಸಿದ ತಲೆಯನ್ನು ತಾಸುಗಟ್ಟಲೆ ತನ್ನ ಮಡಿಲಲ್ಲಿಟ್ಟುಕೊಂಡು ರೋದಿಸಿದ ದೃಶ್ಯ ನೆರೆದಿದ್ದವರ ಮನಕಲುಕಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೊಲೆಯಾದ ಅನುರಾಗ್ ದ್ವಿತೀಯ ಪಿಯುಸಿ ವಿದ್ಯಾರ್ಥಿ. ಟೇಕ್ವಾಂಡೊ ಆಟಗಾರನಾಗಿದ್ದ ಈತ ರಾಜ್ಯ–ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾನೆ.
ಹಲ್ಲುಜ್ಜುವಾಗ ಹತ್ಯೆ:
ಗೌರಾಬಾದ್‌ಶಾಹಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕುಬಿರುದ್ದೀನ್ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ದಶಕಗಳಿಂದಲೂ ಭೂವಿವಾದವಿದೆ. ಬುಧವಾರ ಬೆಳಿಗ್ಗೆ ಅನುರಾಗ್ ತನ್ನ ಮನೆಯ ಮುಂಭಾಗ ಹಲ್ಲುಜ್ಜುತ್ತಿದ್ದಾಗ, ಲಾಲ್ಟಾ ಯಾದವ್ ಏಕಾಏಕಿ ಕತ್ತಿಯಿಂದ ಬಲವಾಗಿ ಬೀಸಿದ್ದಾನೆ. ಈ ಹೊಡೆತಕ್ಕೆ ಅನುರಾಗನ ರುಂಡ–ಮುಂಡ ಬೇರ್ಪಡೆಯಾಗಿವೆ. ಹತ್ಯೆಯ ನಂತರ ಲಾಲ್ಟಾ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಾಲ್ಟಾನನ್ನು ಬಂಧಿಸುವಂತೆ ಆಗ್ರಹಿಸಿ ಸ್ಥಳೀಯರು ರಸ್ತೆ ತಡೆ ನಡೆಸಿದರು. ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿದ್ದಂತೆ ಹೆಚ್ಚುವರಿ ಪೊಲೀಸರು ಜಮಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿದ್ದರು.
‘ಎರಡು ಕುಟುಂಬಗಳ ನಡುವಿನ ತುಂಡು ಭೂಮಿಯ ವಿವಾದವಿದು. ಜಿಲ್ಲಾ ನ್ಯಾಯಾಲಯದಲ್ಲಿ ಈ ಪ್ರಕರಣ ಬಾಕಿ ಉಳಿದಿದೆ. ಹತ್ಯೆಯ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ತನಿಖೆಗೆ ನಿಯೋಜಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಜೌನ್‌ಪುರ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಆರೋಪಿಯ ತಂದೆ ರಮೇಶ್ ಯಾದವ್‌ನನ್ನು ವಶಕ್ಕೆ ಪಡೆಯಲಾಗಿದೆ. ಲಾಲ್ಟಾ ಯಾದವ್ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರವು ದುರ್ಬಲವಾಗಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.