ಕೇಂದ್ರಪಾರ (ಒಡಿಶಾ): ಒಡಿಶಾದ ಗಹಿರ್ಮಾಥ ಸಮುದ್ರ ಜೀವಿಧಾಮದಲ್ಲಿ 2021ರ ಮಾರ್ಚ್ 18ರಂದು ‘ಟ್ಯಾಗ್’ ಮಾಡಲಾದ ಆಲಿವ್ ರಿಡ್ಲೆ ಹೆಣ್ಣು ಆಮೆಯೊಂದು ಬಂಗಾಳ ಕೊಲ್ಲಿಯ ಮೂಲಕ ಮಹಾರಾಷ್ಟ್ರದ ರತ್ನಗಿರಿಯ ಕಡಲತೀರದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ಪ್ರಾಣಿಶಾಸ್ತ್ರೀಯ ಸಮೀಕ್ಷೆ (ಝಡ್‌ಎಸ್‌ಐ) ವಿಜ್ಞಾನಿ ವಾಸುದೇವ್ ತ್ರಿಪಾಠಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಒಡಿಶಾದಲ್ಲಿ ಅಧ್ಯಯನಕ್ಕಾಗಿ ‘ಟ್ಯಾಗ್’ ಮಾಡಿದ ಆಮೆಗಳ ವಲಸೆ ನಡವಳಿಕೆ ನೋಡಿದರೆ, ಇಷ್ಟು ದೂರ ಆಮೆಯೊಂದು ಪ್ರಯಾಣಿಸಿರುವುದು ಇದೇ ಮೊದಲು ಎಂದು ತ್ರಿಪಾಠಿ ತಿಳಿಸಿದರು.
‘ಈ ಹಿಂದೆ ಒಡಿಶಾದ ಗಹಿರ್ಮಾಥ ಸಮುದ್ರ ಜೀವಿಧಾಮದಲ್ಲಿ ‘ಟ್ಯಾಗ್’ ಮಾಡಲಾದ ಆಲಿವ್ ರಿಡ್ಲೆ ಆಮೆಯು ಒಂದು ತಿಂಗಳಲ್ಲಿ ಸುಮಾರು 1000 ಕಿ.ಮೀ. ದೂರ ಕ್ರಮಿಸಿತ್ತು. ಆದರೆ, ಅದು ಅಲ್ಲಿ ಮೊಟ್ಟೆ ಇಟ್ಟಿರಲಿಲ್ಲ. ಆಮೆಗಳ ನಡವಳಿಕೆಯ ಹೆಚ್ಚಿನ ಅಧ್ಯಯನಕ್ಕೆ ‘ಟ್ಯಾಗ್’ ಮಾಡುವುದು ಅಗತ್ಯವಾಗಿದೆ’ ಎಂದು ಅವರು ಹೇಳಿದರು.
‘ಟ್ಯಾಗಿಂಗ್’ ಅಧ್ಯಯನಗಳ ಪ್ರಕಾರ, ಆಲಿವ್ ರಿಡ್ಲೆ ಆಮೆಗಳಿಗೆ ಮೊಟ್ಟೆ ಇಡಲು ಒಡಿಶಾ ನೆಚ್ಚಿನ ತಾಣ. ಆಲಿವ್ ರಿಡ್ಲೆ ಆಮೆಗಳು ‘ಅರಿಬಾಡಾ’ ಎಂದು ಹೆಸರಾದ ವಿಶಿಷ್ಟ ಸಾಮೂಹಿಕ ಗೂಡುಕಟ್ಟುವ ನಡವಳಿಕೆಗೆ ಹೆಸರುವಾಸಿಯಾಗಿವೆ.
ಒಡಿಶಾ ಅರಣ್ಯ ಇಲಾಖೆಯು 1999ರಲ್ಲಿ ಆಮೆಗಳ ಅಧ್ಯಯನಕ್ಕಾಗಿ ‘ಟ್ಯಾಗಿಂಗ್’ ಮಾಡಲು ಪ್ರಾರಂಭಿಸಿತು. ಸುಮಾರು 1000 ಆಮೆಗಳನ್ನು ‘ಟ್ಯಾಗ್’ ಮಾಡಿತು. ಅವುಗಳಲ್ಲಿ ಎರಡು ಶ್ರೀಲಂಕಾದಲ್ಲಿ ಪತ್ತೆಯಾದವು. ‘ಟ್ಯಾಗ್’ ವ್ಯವಸ್ಥೆಯನ್ನು 2021ರಲ್ಲಿ ಝಡ್‌ಎಸ್‌ಐ ಮತ್ತೆ ಪುನರಾರಂಭಿಸಿತು. 20201ರಿಂದ 2024ರವರೆಗೆ ರುಶಿಕುಲ್ಯ, ಗಹಿರ್ಮಾಥ ಕಡಲ ತೀರಗಳಲ್ಲಿ ಸುಮಾರು 12000 ಆಮೆಗಳಿಗೆ ‘ಟ್ಯಾಗ್’ ಮಾಡಲಾಗಿದೆ ಎಂದು ಅಧಿಕೃತ ಮಾಹಿತಿ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.