
ನವದೆಹಲಿ (ಪಿಟಿಐ): ‘ರವೀಂದ್ರನಾಥ ಟ್ಯಾಗೋರ್ ಅವರನ್ನು ಅವಮಾನಿಸುವ ಮೂಲಕ ಅಧಿವೇಶನ ಆರಂಭಿಸಿದ ಸರ್ಕಾರವು, ಮಹಾತ್ಮ ಗಾಂಧಿ ಅವರನ್ನು ಅಪಮಾನಗೊಳಿಸುವ ಮೂಲಕ ಅಧಿವೇಶನ ಅಂತ್ಯಗೊಳಿಸಿತು’ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ರವೀಂದ್ರನಾಥ ಟ್ಯಾಗೋರ್, ಜವಾಹರಲಾಲ್ ನೆಹರೂ ಅವರನ್ನು ಅವಮಾನಿಸುವ ಮತ್ತು ಇತಿಹಾಸವನ್ನು ತಿರುಚುವ ಉದ್ದೇಶದಿಂದ ‘ವಂದೇ ಮಾತರಂ’ ಕುರಿತು ಚರ್ಚೆ ಆರಂಭಿಸಿದ ಸರ್ಕಾರ, ಅಧಿವೇಶನದ ಕೊನೆಯಲ್ಲಿ ‘ವಿಬಿ– ಜಿ ರಾಮ್ ಜಿ’ ಮಸೂದೆ ಮೂಲಕ ಮಹಾತ್ಮ ಗಾಂಧಿ ಅವರಿಗೆ ಅಪಮಾನ ಮಾಡಿತು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ವಿಪ್ ಆಗಿರುವ ಜೈರಾಮ್ ರಮೇಶ್ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ವಿಬಿ–ಜಿ ರಾಮ್ ಜಿ’ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಿತು. ದೆಹಲಿ ವಾಯುಮಾಲಿನ್ಯ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ಸಿದ್ಧವಾಗಿತ್ತು. ಆದರೆ ಸರ್ಕಾರ ಚರ್ಚಿಸದೆ ಪಲಾಯನ ಮಾಡಿತು ಎಂದರು.
Cut-off box - ಚಳಿಗಾಲದ ಅಧಿವೇಶನ ಅಂತ್ಯ ನವದೆಹಲಿ (ಪಿಟಿಐ): ಸಂಸತ್ತಿನ ಚಳಿಗಾಲದ ಅಧಿವೇಶನವು ಶುಕ್ರವಾರ ಅಂತ್ಯಗೊಂಡಿದ್ದು ಅದನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ‘ವಿಬಿ– ಜಿ ರಾಮ್ ಜಿ’ ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಮಸೂದೆ ಸೇರಿದಂತೆ ಪ್ರಮುಖ ಮಸೂದೆಗಳು ಅಂಗೀಕಾರ ಪಡೆದವು. ‘ವಂದೇ ಮಾತರಂ’ನ 150ನೇ ವರ್ಷಾಚರಣೆ ಸಂದರ್ಭದಲ್ಲಿ ಉಭಯ ಸದನಗಳಲ್ಲಿ ತೀವ್ರ ಚರ್ಚೆ ನಡೆಯಿತು. ಚುನಾವಣಾ ಸುಧಾರಣೆ ಕುರಿತು ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ನಡುವೆ ವಾಕ್ಸಮರ ನಡೆಯಿತು. ಉನ್ನತ ಶಿಕ್ಷಣವನ್ನು ಒಂದೇ ಸಂಸ್ಥೆಯ ವ್ಯಾಪ್ತಿಯಡಿ ತರುವ ಉದ್ದೇಶ ಹೊಂದಿರುವ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ–2025’ ಅನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸುವ ನಿರ್ಣಯವನ್ನೂ ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.