ADVERTISEMENT

ಮುಂಬೈ ದಾಳಿ ಆರೋಪಿ ರಾಣಾ ಹಸ್ತಾಂತರ ಯಶಸ್ವಿ: ಎನ್‌ಐಎ

ಮುಂಬೈ ದಾಳಿಯ ಸಂಚುಕೋರ ಕೊನೆಗೂ ಭಾರತದ ಸೆರೆಗೆ l ಪಟಿಯಾಲ ಹೌಸ್ ಕೋರ್ಟ್ ಮುಂದೆ ಹಾಜರು l ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಿಕ್ಕ ದೊಡ್ಡ ಗೆಲುವು

ಪಿಟಿಐ
Published 10 ಏಪ್ರಿಲ್ 2025, 14:12 IST
Last Updated 10 ಏಪ್ರಿಲ್ 2025, 14:12 IST
<div class="paragraphs"><p>ಮುಂಬೈ ದಾಳಿ ಆರೋಪಿ ರಾಣಾ ಹಸ್ತಾಂತರ</p></div>

ಮುಂಬೈ ದಾಳಿ ಆರೋಪಿ ರಾಣಾ ಹಸ್ತಾಂತರ

   

ಚಿತ್ರ ಕೃಪೆ: ಎನ್‌ಐಎ

ನವದೆಹಲಿ: ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬ, ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹವ್ವುರ್‌ ಹುಸೇನ್‌ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿದ್ದು, ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಶದಲ್ಲಿದ್ದಾನೆ.

ADVERTISEMENT

ರಾಣಾನನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಎನ್‌ಐಎ, ಆತನನ್ನು 20 ದಿನ ಕಸ್ಟಡಿಗೆ ನೀಡುವಂತೆ ಕೋರಿತು. ವಾದ–ಪ್ರತಿವಾದ ಆಲಿಸಿದ ನ್ಯಾಯಾಲಯ, ಈ ಕುರಿತ ಆದೇಶವನ್ನು ಕಾಯ್ದಿರಿಸಿತು.

ಗುರುವಾರ ಸಂಜೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಶೇಷ ವಿಮಾನದಿಂದ ಆರೋಪಿ ಹೊರಬರುತ್ತಿದ್ದಂತೆಯೇ ಎನ್‌ಐಎ ಅಧಿಕಾರಿಗಳು ಬಂಧಿಸಿದರು. ‘ಅಮೆರಿಕದಿಂದ ರಾಣಾನ ಹಸ್ತಾಂತರ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು, ನವದೆಹಲಿಗೆ ಬಂದಿಳಿದ ಕೂಡಲೇ ಬಂಧಿಸಲಾಯಿತು’ ಎಂದು ಎನ್‌ಐಎ ತಿಳಿಸಿದೆ.

ಮುಂಬೈ ದಾಳಿ ಘಟನೆ ನಡೆದ 16 ವರ್ಷಗಳ ನಂತರ ನಡೆದಿರುವ ಹಸ್ತಾಂತರ ಪ್ರಕ್ರಿಯೆಯು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಿಕ್ಕ ಬಲು ದೊಡ್ಡ ಜಯ ಎಂದು ವಿಶ್ಲೇಷಿಸಲಾಗಿದೆ. ಈ ದಾಳಿಯಲ್ಲಿ ಪಾಕಿಸ್ತಾನ ಸರ್ಕಾರದ ಪಾತ್ರವನ್ನು ಹೊರಗೆಳೆಯಲು ರಾಣಾ ಹಸ್ತಾಂತರವು ತನಿಖಾ ಸಂಸ್ಥೆಗಳಿಗೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಎನ್‌ಐಎ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಆರೋಪಿಯ ವೈದ್ಯಕೀಯ ಪರೀಕ್ಷೆ ಒಳಗೊಂಡಂತೆ ಹಸ್ತಾಂತರಕ್ಕೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಬಂಧಿಸಿದರು. 

ಆ ಬಳಿಕ ಬಿಗಿ ಭದ್ರತೆಯಲ್ಲಿ ವಿಶೇಷ ಎನ್‌ಐಎ ನ್ಯಾಯಾಧೀಶ ಚಂದರ್‌ಜೀತ್‌ ಸಿಂಗ್‌ ಮುಂದೆ ಹಾಜರುಪಡಿಸಲಾಯಿತು. ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಪೀಯೂಷ್‌ ಸಚ್‌ದೇವ್‌ ಅವರು ಆರೋಪಿ ರಾಣಾ ಪರ ಹಾಜರಾದರು.

ಹಸ್ತಾಂತರ ಪ್ರಕ್ರಿಯೆ ಯುಪಿಎ ಅವಧಿಯಲ್ಲೇ ಆರಂಭವಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಅದರ ಶ್ರೇಯವನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ
ಪಿ.ಚಿದಂಬರಂ, ಕಾಂಗ್ರೆಸ್‌ ನಾಯಕ
ರಾಣಾ ಹಸ್ತಾಂತರವು ಮೋದಿ ಸರ್ಕಾರ ಮತ್ತು ದೇಶದ ಭದ್ರತಾ ಏಜೆನ್ಸಿಗಳ ‘ದೊಡ್ಡ ಸಾಧನೆ’. ಯುಪಿಎ ಸರ್ಕಾರ ಭಯೋತ್ಪಾದನೆ ಬಗ್ಗೆ ಮೃದು ಧೋರಣೆ ಹೊಂದಿತ್ತು
ಶೆಹಜಾದ್‌ ಪೂನಾವಾಲಾ, ಬಿಜೆಪಿ ರಾಷ್ಟ್ರೀಯ ವಕ್ತಾರ

ದಯಾನ್ ಕೃಷ್ಣನ್‌ ನೇತೃತ್ವದಲ್ಲಿ ವಾದ

ರಾಣಾನನ್ನು ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಅಮೆರಿಕದ ನ್ಯಾಯಾಲಯದಲ್ಲಿ ಭಾರತದ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ದಯಾನ್‌ ಕೃಷ್ಣನ್‌ ಅವರು ಎನ್‌ಐಎ ಪರ ವಕೀಲರ ತಂಡದ ನೇತೃತ್ವ ವಹಿಸಲಿದ್ದಾರೆ.

ಹಸ್ತಾಂತರ ಪ್ರಕ್ರಿಯೆಗೆ 2010ರಿಂದಲೂ ನೆರವು ನೀಡಿರುವ ಕೃಷ್ಣನ್ ಅವರಿಗೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ನರೇಂದರ್ ಮಾನ್ ವಾದದಲ್ಲಿ ಸಹಾಯ ನೀಡಲಿದ್ದಾರೆ. ವಕೀಲರ ತಂಡದಲ್ಲಿ ಎನ್‌ಐಎ ನ್ಯಾಯವಾದಿ ಅಲ್ಲದೆ ವಕೀಲರಾದ ಸಂಜೀವಿ ಶೇಷಾದ್ರಿ
ಮತ್ತು ಶ್ರೀಧರ್‌ ಕಾಳೆ ಅವರೂ ಇರುವರು ಎಂದು ಮೂಲಗಳು ತಿಳಿಸಿವೆ.

ದಿನದ ಬೆಳವಣಿಗೆ

l ಗುರುವಾರ ಸಂಜೆ ನವದೆಹಲಿಗೆ ಬಂದಿಳಿದ ವಿಶೇಷ ವಿಮಾನ

l ಅಮೆರಿಕದ ಲಾಸ್‌ ಏಂಜಲೀಸ್‌ನಿಂದ ಬುಧವಾರ ಪ್ರಯಾಣ ಬೆಳೆಸಿದ್ದ ವಿಮಾನ

l ವಿಮಾನ ನಿಲ್ದಾಣದಲ್ಲೇ ಎನ್‌ಐಎ ಅಧಿಕಾರಿಗಳಿಂದ ಆರೋಪಿ ಬಂಧನ

l ರಾಣಾ ಪ್ರಕರಣದ ವಿಚಾರಣೆಗೆ ವಿಶೇಷ ಪ್ರಾಸಿಕ್ಯೂಟರ್‌ ಆಗಿ ನರೇಂದರ್‌ ಮಾನ್‌ ನೇಮಕ

l ವಿಚಾರಣೆಗೆ ಸಂಬಂಧಿಸಿದ ಕಡತಗಳನ್ನು ಮುಂಬೈನಿಂದ ತರಿಸಿಕೊಂಡ ನ್ಯಾಯಾಲಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.