ADVERTISEMENT

ಕೋವಿಡ್‌–19: ತಮಿಳುನಾಡು ಕೃಷಿ ಸಚಿವ ದುರೈಕಣ್ಣು ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ನವೆಂಬರ್ 2020, 5:38 IST
Last Updated 1 ನವೆಂಬರ್ 2020, 5:38 IST
ಕೋವಿಡ್ ಪರೀಕ್ಷೆ (ಸಾಂದರ್ಭಿಕ ಚಿತ್ರ)
ಕೋವಿಡ್ ಪರೀಕ್ಷೆ (ಸಾಂದರ್ಭಿಕ ಚಿತ್ರ)   

ಚೆನ್ನೈ: ತಮಿಳುನಾಡಿನ ಕೃಷಿ ಸಚಿವ ಆರ್.ದುರೈಕಣ್ಣು (72) ಶನಿವಾರ ರಾತ್ರಿ 11.15ಕ್ಕೆ ನಿಧನರಾದರು. ಅವರಿಗೆ ಕೋವಿಡ್ ಸೋಂಕು ತಗುಲಿತ್ತು.

ತಾಂಜಾವೂರು ಜಿಲ್ಲೆಯ ಪಾಪನಾಶಂ ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ಅವರು ಆಯ್ಕೆಯಾಗಿದ್ದರು. ಅವರನ್ನು ಕೋವಿಡ್ ಸೋಂಕು ತಗುಲಿರುವ ಕಾರಣ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಅಕ್ಟೋಬರ್ 13ರಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಮುಖ್ಯಮಂತ್ರಿ ಪಳನಿಸ್ವಾಮಿ ಅವರ ತಾಯಿಗೆ ಅಂತಿಮ ನಮನ ಸಲ್ಲಿಸಲು ಸೇಲಂಗೆ ತೆರಳುತ್ತಿದ್ದಾಗ ಅಕ್ಟೋಬರ್ 13ರಂದು ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ವಿಲ್ಲುಪುರಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅದೇ ದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಕೋವಿಡ್ ಪರೀಕ್ಷೆ ನಡೆಸಿದಾಗ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ADVERTISEMENT

1948ರಲ್ಲಿ ಜನಿಸಿದ ದುರೈಕಣ್ಣು ಅವರು 2006ರಲ್ಲಿ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ 2011 ಹಾಗೂ 2016ರ ಚುನಾವಣೆಗಳಲ್ಲೂ ಜಯಶಾಲಿಯಾಗಿದ್ದರು. 2016ರಲ್ಲಿ ಆಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.