ADVERTISEMENT

ಸುಗ್ರೀವಾಜ್ಞೆ ಮುಖಾಂತರ ‘ಆನ್‌ಲೈನ್‌ ಗೇಮಿಂಗ್‌’ ನಿಷೇಧ

ಪಿಟಿಐ
Published 20 ನವೆಂಬರ್ 2020, 20:56 IST
Last Updated 20 ನವೆಂಬರ್ 2020, 20:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಬೆಟ್ಟಿಂಗ್‌ ಇರುವ ಆನ್‌ಲೈನ್‌ ಆಟಗಳನ್ನು ನಿಷೇಧಿಸುವ ಸುಗ್ರೀವಾಜ್ಞೆಯನ್ನು ತಮಿಳುನಾಡು ಸರ್ಕಾರ ಶುಕ್ರವಾರ ಹೊರಡಿಸಿದೆ.

ರಾಜ್ಯದಲ್ಲಿ ಆನ್‌ಲೈನ್‌ ಆಟಗಳಲ್ಲಿ ಹಣ ಕಳೆದುಕೊಂಡು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ. ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ‘ಆನ್‌ಲೈನ್‌ ಆಟಗಳಿಂದಾಗಿ ಮುಗ್ಧ ಜನರು, ಅದರಲ್ಲೂ ಪ್ರಮುಖವಾಗಿ ಯುವಜನರು ಮೋಸ ಹೋಗುತ್ತಿದ್ದಾರೆ. ಹಣ ಕಳೆದುಕೊಂಡು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇವರನ್ನು ರಕ್ಷಿಸಲು ಪೊಲೀಸ್‌ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ಆಗಬೇಕು’ ಎಂದು ಸರ್ಕಾರ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿತ್ತು.

ಆನ್‌ಲೈನ್‌ ಆಟಗಳನ್ನು ಆಡುವವರಿಗೆ ₹5 ಸಾವಿರ ದಂಡ ಹಾಗೂ ಆರು ತಿಂಗಳ ಜೈಲು ಶಿಕ್ಷೆ ಮತ್ತು ಇಂಥ ಆಟಗಳನ್ನು ನಡೆಸುವವರಿಗೆ, ಅಂಗಡಿಗಳಲ್ಲಿ ಆಡಿಸುತ್ತಿರುವವರಿಗೆ ₹10 ಸಾವಿರ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಬೆಟ್ಟಿಂಗ್‌ಗೆ, ಗೆದ್ದವರಿಗೆ ನಗದು ನೀಡಲು ಆನ್‌ಲೈನ್‌ ಮೂಲಕ ಹಣ ನೀಡುವುದು ಮತ್ತು ಪಡೆಯುವುದಕ್ಕೂ ನಿಷೇಧ ಹೇರಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.