ರಾಯಿಟರ್ಸ್ ಚಿತ್ರ
ಚೆನ್ನೈ: ಸಮುದ್ರ ಮಟ್ಟ ಏರಿಕೆಯಿಂದ ಹಾನಿಗೀಡಾಗಬಹುದಾದ ಕರಾವಳಿಯ ಜೈವಿಕ ಆವಾಸಸ್ಥಾನಗಳ ರಕ್ಷಣೆ ಮತ್ತು ಕಡಲ ಕೊರೆತ ತಪ್ಪಿಸಲು ಕುಡ್ಡಲೂರು ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಆರು ಲಕ್ಷ ಮ್ಯಾಂಗ್ರೂ ಸಸಿಗಳನ್ನು ನೆಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.
ಹವಾಮಾನ ಬದಲಾವಣೆಗಾಗಿ TN-SHORE ಎಂಬ ಈ ಯೋಜನೆಯಲ್ಲಿ ಕರಾವಳಿ ಪ್ರದೇಶದಲ್ಲಿ ಜೈವಿಕ ಕವಚ ರಚಿಸಲು ₹25 ಕೋಟಿ ಮೀಸಲಿಡಲಾಗಿದೆ ಎಂದು ಸರ್ಕಾರ ಹೇಳಿದೆ.
ಹೊಸದಾಗಿ ಮ್ಯಾಂಗ್ರೂ ಗಿಡಗಳನ್ನು ನೆಡಲು 2,436 ಹೆಕ್ಟೇರ್ ಪ್ರದೇಶವನ್ನು ಸರ್ಕಾರ ಗುರುತಿಸಿದೆ. 1,207 ಹೆಕ್ಟೇರ್‌ನಲ್ಲಿ ಈ ಹಿಂದೆ ನಾಶವಾಗಿದ್ದ ಮ್ಯಾಂಗ್ರೂ ಕಾಡುಗಳನ್ನು ಮರುಸ್ಥಾಪಿಸಲಾಗಿದೆ. ಇದಕ್ಕಾಗಿ ಗ್ರಾಮ ಮಟ್ಟದ ಮ್ಯಾಂಗ್ರೂ ಸಮಿತಿಗಳು, ಸ್ಥಳೀಯ ಸಮುದಾಯದ ನೆರವು ಪಡೆಯಲಾಗಿದೆ ಎಂದು ಸರ್ಕಾರ ಹೇಳಿದೆ.
ವಿಶ್ವ ಮ್ಯಾಂಗ್ರೂ ದಿನವಾದ ಶನಿವಾರ (ಜುಲೈ 26) ಅಡಯಾರ್ ಎಸ್ಟುರಿ ಎಂಬ ಪ್ರದೇಶದಲ್ಲಿ ಮ್ಯಾಂಗ್ರೂ ಗಿಡಗಳನ್ನು ನೆಟ್ಟು ಹಣಕಾಸು ಹಾಗೂ ಪರಿಸರ ಸಚಿವ ತಂಗಮ್ ತೆನ್ನರಸು ಈ ಅಭಿಯಾನಕ್ಕೆ ಚಾಲನೆ ನೀಡಿದರು.
‘ಭವಿಷ್ಯಕ್ಕಾಗಿ ಜೌಗುಪ್ರದೇಶವನ್ನು ಉಳಿಸಿಕೊಳ್ಳುವುದು’ 2025ರ ವಿಶ್ವ ಮ್ಯಾಂಗ್ರೂ ಅರಣ್ಯ ದಿನದ ಸಂದೇಶವಾಗಿದೆ. ಸುಸ್ಥಿರ ಭವಿಷ್ಯಕ್ಕಾಗಿ ನಿಸರ್ಗವೇ ನೀಡಿದ ಮಾರ್ಗೋಪಾಯವೇ ಮ್ಯಾಂಗ್ರೂ ಅರಣ್ಯ. ಇಂಗಾಲದ ಶೇಖರಣೆಯಲ್ಲಿ ಇದು ಅತ್ಯಂತ ಪರಿಣಾಮಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.