ADVERTISEMENT

ರಜನಿ ಪಕ್ಷದೊಂದಿಗಿನ ಮೈತ್ರಿ ಸಾಧ್ಯತೆ ನಿರಾಕರಿಸದ ಕಮಲ್‌ ಹಾಸನ್‌

ಪಿಟಿಐ
Published 14 ಡಿಸೆಂಬರ್ 2020, 5:03 IST
Last Updated 14 ಡಿಸೆಂಬರ್ 2020, 5:03 IST
ಸಮಾರಂಭವೊಂದರಲ್ಲಿ ಕಮಲ್‌ ಹಾಸನ್‌ ಮತ್ತು ರಜನಿಕಾಂತ್‌
ಸಮಾರಂಭವೊಂದರಲ್ಲಿ ಕಮಲ್‌ ಹಾಸನ್‌ ಮತ್ತು ರಜನಿಕಾಂತ್‌    

ಮಧುರೈ: ರಜನಿಕಾಂತ್‌ ಅವರ ಪಕ್ಷದೊಂದಿಗಿನ ಮೈತ್ರಿ ಸಾಧ್ಯತೆಗಳನ್ನು ನಿರಾಕರಿಸದ 'ಮಕ್ಕಳ್‌ ನೀದಿಮಯಂ' ಪಕ್ಷದ ಸಂಸ್ಥಾಪಕ ಕಮಲ್‌ ಹಾಸನ್‌, ಈ ಮೂಲಕ ತಮಿಳುನಾಡಿನಲ್ಲಿ ಹೊಸ ರಾಜಕೀಯ ಮೈತ್ರಿಯೊಂದರ ಮುನ್ಸೂಚನೆ ನೀಡಿದ್ದಾರೆ.

ದೇಗುಲಗಳ ನಗರ ಎಂದು ಕರೆಯಲಾಗುವ ಮಧುರೈನಲ್ಲಿ ಭಾನುವಾರ ಪಕ್ಷದ ಅಭಿಯಾನಕ್ಕೆ ಚಾಲನೆ ನೀಡಿದ ಕಮಲ್‌ ಹಾಸನ್‌ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು. 'ಮೈತ್ರಿಗಳು ಮುರಿಯುತ್ತವೆ ಮತ್ತು ಮೈತ್ರಿಗಳು (ಹೊಸ ಸಂಯೋಜನೆಗಳು) ಒಟ್ಟಾಗುತ್ತವೆ' ಎಂದು ಮಾರ್ಮಿಕವಾಗಿ ಅವರು ಮಾತನಾಡಿದರು.

ರಜನಿಕಾಂತ್ ಅವರ ಪಕ್ಷದೊಂದಿಗೆ ಭವಿಷ್ಯದಲ್ಲಿ ಯಾವುದಾದರೂ ಚುನಾವಣಾ ಒಪ್ಪಂದವನ್ನು ಮಾಡಿಕೊಳ್ಳುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲ್‌ ಹಾಸನ್‌, 'ಮೈತ್ರಿಗಳ ಬಗ್ಗೆ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ,' ಎಂದರು.

ADVERTISEMENT

'ಮಕ್ಕಳ್‌ ನೀದಿಮಯಂ' ನೇತೃತ್ವದಲ್ಲಿ ತಮಿಳುನಾಡಿನಲ್ಲಿ ತೃತೀಯ ರಂಗವೇನಾದರೂ ರಚನೆಯಾಗಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ಅದು ಯಾವಾಗ ಸಂಭವಿಸುತ್ತದೆ ಎಂದು ಬಹಿರಂಗಪಡಿಸಲು ಆಗದು,' ಎಂದು ಹೇಳಿದರು.

ತಮಿಳುನಾಡಿನ ಹಲವೆಡೆಗಳಲ್ಲಿ ಪ್ರಚಾರ ಅಭಿಯಾನ ಕೈಗೊಳ್ಳಲು ಸರ್ಕಾರ ಕಮಲ್‌ಹಾಸನ್‌ ಅವರಿಗೆ ಅನುಮತಿ ನಿರಾಕರಿಸಿರುವ ಕುರಿತು ಮಾತನಾಡಿದ ಅವರು, 'ಇಂಥ ಅಡೆತಡೆಗಳು ಹೊಸತೇನಲ್ಲ. ನಾವು ಕೋವಿಡ್‌ ನಿಯಮಾವಳಿಗಳನ್ನು ಪಾಲಿಸುತ್ತಲೇ ಜನರನ್ನು ತಲುಪಲು ಸಜ್ಜಾಗಿದ್ದೇವೆ,' ಎಂದು ಅವರು ತಿಳಿಸಿದರು.

ತಮ್ಮ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ, ಮಧುರೈಯನ್ನು ತಮಿಳುನಾಡಿನ ಎರಡನೇ ರಾಜಧಾನಿಯಾಗಿ ಮಾಡುವುದಾಗಿ ಪ್ರಚಾರ ಆಂದೋಲನದಲ್ಲಿ ಭಾಗವಹಿಸಿದ್ದವರಿಗೆ ಅವರು ಭರವಸೆ ನೀಡಿದರು. ಅಲ್ಲದೆ, ಜನರ ಬೆಂಬಲದೊಂದಿಗೆ ಭ್ರಷ್ಟಾಚಾರವನ್ನು ತೊಡೆದುಹಾಕುವ ವಿಶ್ವಾಸವನ್ನೂ ಅವರು ಇದೇ ವ್ಯಕ್ತಪಡಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಕಮಲ್‌ ಹಾಸನ್‌ ಅವರ ಪಕ್ಷವು ತನ್ನ ಮೊದಲ ಚುನಾವಣೆ ಎದುರಿಸಿತ್ತು. ತಮಿಳುನಾಡಿನ 38 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ 'ಮಕ್ಕಳ್‌ ನೀದಿಮಯಂ' ಒಂದೂ ಸ್ಥಾನವನ್ನು ಗೆಲ್ಲದೇ, ಒಟ್ಟಾರೆ ಕೇವಲ 3.77 ರಷ್ಟು ಮತಗಳನ್ನು ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.