ADVERTISEMENT

ತಮಿಳುನಾಡಿನಲ್ಲಿ ನೀಟ್‌ನಿಂದ ವಿನಾಯಿತಿ ನೀಡುವ ಮಸೂದೆ ಮಂಡನೆ

ಪಿಟಿಐ
Published 13 ಸೆಪ್ಟೆಂಬರ್ 2021, 8:46 IST
Last Updated 13 ಸೆಪ್ಟೆಂಬರ್ 2021, 8:46 IST
ಎಂ.ಕೆ. ಸ್ಟಾಲಿನ್‌
ಎಂ.ಕೆ. ಸ್ಟಾಲಿನ್‌   

ಚೆನ್ನೈ: ನೀಟ್‌ನಿಂದ ಶಾಶ್ವತವಾಗಿ ವಿನಾಯಿತಿ ಕೋರಿ ಹಾಗೂ 12ನೇ ತರಗತಿ ಅಂಕಗಳನ್ನು ಆಧರಿಸಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ಮಸೂದೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದರು.‌

ನೀಟ್‌ಪರೀಕ್ಷೆಯ ಭಯದಿಂದ ಭಾನುವಾರ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸದನದಲ್ಲಿ ಪ್ರತಿಧ್ವನಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಅವರು ಈ ಮಸೂದೆ ಮಂಡಿಸಿದರು.

‘ಡಿಎಂಕೆ ಪಕ್ಷ, ನೀಟ್‌ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧಗೊಂಡಿರಲಿಲ್ಲ'ಎಂದು ಪಳನಿಸ್ವಾಮಿ ಆರೋಪಿಸಿದರು. ಮೃತರ ಕುಟುಂಬಕ್ಕೆ ನಗದು ಪರಿಹಾರ ನೀಡುವ ಜತೆಗೆ, ಸದಸ್ಯರೊಬ್ಬರಿಗೆ ಕೆಲಸಕೊಡಬೇಕೆಂದು ಒತ್ತಾಯಿಸಿದರು. ನಂತರ ಕಪ್ಪು ಪಟ್ಟಿ ಧರಿಸಿ ಸದನಕ್ಕೆ ಬಂದಿದ್ದ ವಿರೋಧ ಪಕ್ಷದ ಸದಸ್ಯರು ಪಳನಿಸ್ವಾಮಿ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.

ADVERTISEMENT

ವಿರೋಧ ಪಕ್ಷದವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸ್ಟಾಲಿನ್, ‘ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ನೀಟ್‌ ಪರೀಕ್ಷೆ ನಡೆದಿರಲಿಲ್ಲ. ಆದರೆ, ಅವರದೇ ಪಕ್ಷದ ಕೆ.ಪಳನಿಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡಿನಲ್ಲಿ ಮೊದಲ ಬಾರಿಗೆ ‘ನೀಟ್‌‘ ಪರೀಕ್ಷೆ ನಡೆದಿತ್ತು. ನೀಟ್ ಪರೀಕ್ಷೆ ವಿಷಯವಾಗಿ ಸಾಯುವಂತಹ ದುಡುಕಿನ ನಿರ್ಧಾರ ತೆಗೆದುಕೊಂಡ ವಿದ್ಯಾರ್ಥಿ ಧನುಷ್‌ ಎರಡು ಬಾರಿ ಪರೀಕ್ಷೆಯಲ್ಲಿ ಫೇಲ್‌ ಆದಾಗಲೂ ತಮಿಳುನಾಡಿನಲ್ಲಿ ಎಐಎಡಿಎಂಕೆ ಸರ್ಕಾರವೇ ಅಧಿಕಾರದಲ್ಲಿತ್ತು'ಎಂದು ಮುಖ್ಯಮಂತ್ರಿ ಸ್ಟಾಲಿನ್ ತಿರುಗೇಟು ನೀಡಿದರು.

ಗದ್ದಲದ ನಡುವೆಯೇ ಸ್ಟಾಲಿನ್ ಅವರು, ‘ನೀಟ್‌'ತೆಗೆದು ಹಾಕುವ ಮಸೂದೆಯನ್ನು ಮಂಡಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಈ ಮಸೂದೆಯನ್ನು ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು. ಈ ಉಪಕ್ರಮವು ಹಿಂದಿನ ಎಐಎಡಿಎಂಕೆ ಆಡಳಿತದ ಅವಧಿಯಲ್ಲಿ ಕೈಗೊಂಡ ಕ್ರಮಕ್ಕಿಂತ ಭಿನ್ನವಾಗಿದೆ'ಎಂದು ಹೇಳಿದರು.

ಈ ಮಸೂದೆಯು ಪಿಯುಸಿ ಅಥವಾ ತತ್ಸಮಾನ ಅರ್ಹತಾ ಪರೀಕ್ಷೆಗಳ ಆಧಾರದಲ್ಲೇ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತದೆ ಹಾಗೂ ಮುಖ್ಯವಾಗಿ ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.