ADVERTISEMENT

ತಮಿಳುನಾಡು ವಿದ್ಯಾರ್ಥಿನಿ ಸಾವು ಪ್ರಕರಣ: ಶಿಕ್ಷಕರ ಸೆರೆ, ಕೇಸು ಸಿಬಿಸಿಐಡಿಗೆ

ಪಿಟಿಐ
Published 18 ಜುಲೈ 2022, 7:49 IST
Last Updated 18 ಜುಲೈ 2022, 7:49 IST
ವಿದ್ಯಾರ್ಥಿನಿ ಸಾವಿನ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರ (ಪಿಟಿಐ)
ವಿದ್ಯಾರ್ಥಿನಿ ಸಾವಿನ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರ (ಪಿಟಿಐ)   

ಕಳ್ಳಕುರುಚಿ (ತಮಿಳುನಾಡು): ವಿದ್ಯಾರ್ಥಿನಿಯೊಬ್ಬಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಶಾಲೆಯೊಂದರ ಇಬ್ಬರು ಶಿಕ್ಷಕರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಜುಲೈ 17 ರಂದು ಶಾಲೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಸುಮಾರು 300 ಜನರನ್ನು ಬಂಧಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಮಧ್ಯೆ ಸರ್ಕಾರವು ಪ್ರಕರಣವನ್ನು ಸಿಬಿಸಿಐಡಿಗೆ ವಹಿಸಿರುವಾಗಿ ವರದಿಗಳಾಗಿವೆ.

ವಿದ್ಯಾರ್ಥಿನಿ ಸಾವಿನ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆಸಿದ ಕಾರಣಕ್ಕೆ ಭಾನುವಾರ 70 ಜನರನ್ನು ಬಂಧಿಸಲಾಗಿತ್ತು. ವಿದ್ಯಾರ್ಥಿನಿ ಸಾವಿಗೆ ಸಂಬಂಧಿಸಿದಂತೆ ಶಾಲಾ ಆಡಳಿತದ ಮೂವರನ್ನು ಬಂಧಿಸಲಾಗಿತ್ತು.

ADVERTISEMENT

ಅಧ್ಯಯನದ ವಿಚಾರವಾಗಿ ತಮ್ಮ ಮಗಳಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಗಣಿತ ಮತ್ತು ರಸಾಯನಶಾಸ್ತ್ರ ಬೋಧಿಸುವ ಇಬ್ಬರು ಶಿಕ್ಷಕರ ವಿರುದ್ಧ ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಕಳ್ಳಕುರುಚಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಚಿನ್ನಸೇಲಂನ ಕಣಿಯಮೂರ್ ಪ್ರದೇಶದ ಖಾಸಗಿ ವಸತಿ ಶಾಲೆಯಲ್ಲಿ 12 ನೇ ತರಗತಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ಜುಲೈ 13 ರಂದು ಹಾಸ್ಟೆಲ್ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಳು.

ಹಾಸ್ಟೆಲ್‌ನ ಮೂರನೇ ಮಹಡಿಯ ಕೊಠಡಿಯೊಂದರಲ್ಲಿದ್ದ ವಿದ್ಯಾರ್ಥಿನಿ ಮೇಲಿನ ಮಹಡಿಯಿಂದ ನೆಲಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಆದರೆ, ಸಾವಿಗೂ ಮೊದಲೇ ಆಕೆಗೆ ಗಾಯಗಳಾಗಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿಯು ಹೇಳಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಾವಿಗೆ ಸಂಬಂಧಿಸಿದಂತೆ ಹಲವು ಅನುಮಾನಗಳಿವೆ ಎಂದು ಆರೋಪಿಸಿರುವ ವಿದ್ಯಾರ್ಥಿನಿಯ ಪೋಷಕರು ಮತ್ತು ಸಂಬಂಧಿಕರು ನ್ಯಾಯಕ್ಕಾಗಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.