ADVERTISEMENT

ಸಿಡಬ್ಲ್ಯೂಸಿಗೆ ತಮಿಳುನಾಡು ಮನವಿ

ಕರ್ನಾಟಕ ಗಡಿಯಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ಒಲವು

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 20:05 IST
Last Updated 24 ಜೂನ್ 2019, 20:05 IST
   

ನವದೆಹಲಿ: ಕರ್ನಾಟಕದ ಗಡಿಯಲ್ಲಿ ರುವ ಬಿಳಿಗುಂಡ್ಲು ಬಳಿಯ ರಾಸಿಮನಲ್‌ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಲು ತಮಿಳುನಾಡು ಸರ್ಕಾರಕ್ಕೆ ಅನುಮತಿ ನೀಡುವಂತೆ ಕೋರಿ ಅಲ್ಲಿನ ರೈತ ಸಂಘಟನೆಗಳು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ)ಕ್ಕೆ ಮನವಿ ಸಲ್ಲಿಸಿವೆ.

ತಮಿಳುನಾಡಿನ ರೈತ ಒಕ್ಕೂಟಗಳ ಮುಖ್ಯಸ್ಥ ಪಿ.ಆರ್‌. ಪಾಂಡಿಯನ್‌ ನೇತೃತ್ವದಲ್ಲಿ ಸೋಮವಾರ ಸಂಜೆ ಆಯೋಗದ ಅಧ್ಯಕ್ಷ ಮಸೂದ್‌ ಹುಸೇನ್‌ ಅವರನ್ನು ಭೇಟಿ ಮಾಡಿದ ರೈತರು, ತಮಿಳುನಾಡಿನ ಪಾಲಿನ ಜೂನ್‌ ತಿಂಗಳ ಕಾವೇರಿ ನೀರನ್ನು ಹರಿಸಲು ಕ್ರಮ ಕೈಗೊಳ್ಳಬೇಕು ಎಂದೂ ಮನವಿ ಮಾಡಿದ್ದಾರೆ.

ಕಾವೇರಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸಲು ಮುಂದಾಗಿದೆ. ಈ ಯೋಜನೆ ಆರಂಭವಾದರೆ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣದಲ್ಲಿ ಕಡಿತ ಉಂಟಾಗಲಿದ್ದು, ತೀವ್ರ ಸಂಕಷ್ಟ ಎದುರಾಗಲಿದೆ ಎಂದು ರೈತರು ದೂರಿದ್ದಾರೆ.

ADVERTISEMENT

ಕರ್ನಾಟಕಕ್ಕೆ ಅಣೆಕಟ್ಟೆ ನಿರ್ಮಿಸಲು ಅವಕಾಶ ನೀಡದೆ, ರಾಸಿಮನಲ್‌ ಬಳಿ ತಮಿಳುನಾಡು ರೂಪಿಸಿರುವ ಯೋಜನೆಗೆ ಅನುಮತಿ ನೀಡಬೇಕು ಎಂದು ಕೋರಿ
ರುವ ರೈತರು, ಒಂದೊಮ್ಮೆ ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ ತಮಿಳುನಾಡಿನ 25 ಲಕ್ಷ ಎಕರೆ
ಭೂಮಿಗೆ ನೀರಾವರಿ ಸೌಲಭ್ಯ ದೊರೆಯದೆ ರೈತರು ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಪ್ರಧಾನಿ ಮಧ್ಯಸ್ಥಿಕೆಗೆ ಮನವಿ: ಮೇಕೆ ದಾಟು ಯೋಜನೆಗೆ ಪರಿಸರ ಅನುಮತಿ ನೀಡಕೂಡದು ಎಂದು ಕೋರಿ ತಮಿಳು ನಾಡಿನ ಸಿ.ಎಂ ಪಳನಿಸ್ವಾಮಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಕಾವೇರಿ: ಪ್ರಾಧಿಕಾರದ ಸಭೆ ಇಂದು

ನವದೆಹಲಿ: ಕಾವೇರಿ ನದಿ ನೀರಿನ ಹಂಚಿಕೆ ಮತ್ತು ನಿರ್ವಹಣೆ ಕುರಿತು ಚರ್ಚಿಸುವ ಉದ್ದೇಶದಿಂದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಮಂಗಳವಾರ ಸಭೆ ಆಯೋಜಿಸಿದೆ.

ನಿರೀಕ್ಷಿತ ಮುಂಗಾರು ಸುರಿಯದ್ದರಿಂದ ಜಲಾಶಯಗಳು ಭರ್ತಿಯಾಗದೆ ಕರ್ನಾಟಕದಲ್ಲಿ ಆತಂಕದ ಛಾಯೆ ಆವರಿಸಿದೆ. ಆದರೆ, ಕೂಡಲೇ ಜೂನ್‌ ತಿಂಗಳಿನ ತನ್ನ ಪಾಲಿನ ನೀರನ್ನು ಹರಿಸುವಂತೆ ತಮಿಳುನಾಡು ಬೇಡಿಕೆ ಸಲ್ಲಿಸಿರುವುದರಿಂದ ಈ ಸಭೆಗೆ ಮಹತ್ವ ದೊರೆತಿದೆ.

ಉತ್ತಮ ಮುಂಗಾರು ಸುರಿದಲ್ಲಿ ಮಾತ್ರ ತಮಿಳುನಾಡಿಗೆ 9.19 ಟಿಎಂಸಿ ಅಡಿ ನೀರು ಹರಿಸಬೇಕು. ಇಲ್ಲದಿದ್ದರೆ ಮುಂದಿನ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರವು ಮೇ 28ರಂದು ಆಯೋಜಿಸಿದ್ದ ಸಭೆಯಲ್ಲಿ ರಾಜ್ಯಕ್ಕೆ ತಿಳಿಸಿತ್ತು.

ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ)ದ ಮುಖ್ಯಸ್ಥರೂ ಆಗಿರುವ ಪ್ರಾಧಿಕಾರದ ಅಧ್ಯಕ್ಷ ಎಸ್‌.ಮಸೂದ್ ಹುಸೇನ್ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಸಭೆಯ ನೇತೃತ್ವ ವಹಿಸಲಿದ್ದು, ಕಾವೇರಿ ಕಣಿವೆ ವ್ಯಾಪ್ತಿಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಪ್ರತಿನಿಧಿಗಳು ಭಾಗವಹಿಸುವರು.

ಜೂನ್‌ 30ಕ್ಕೆ ನಿವೃತ್ತರಾಗಲಿರುವ ಮಸೂದ್‌ ಹುಸೇನ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅಂತಿಮ ಸಭೆ ಇದಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.