
ನವದೆಹಲಿ: ಕೇಂದ್ರ ಸಚಿವ ಎಲ್.ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ‘ಪರಾಶಕ್ತಿ’ ಚಿತ್ರದ ನಟರಾದ ಶಿವಕಾರ್ತಿಕೇಯನ್, ರವಿ ಮೋಹನ್(ಜಯಂ ರವಿ) ಅವರು ಪಾಲ್ಗೊಂಡಿರುವುದು ಚುನಾವಣೆ ಸಮೀಪಿಸುತ್ತಿರುವ ತಮಿಳುನಾಡಿನಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ‘ಪರಾಶಕ್ತಿ’ ಚಿತ್ರಕ್ಕೆ ತಮಿಳುನಾಡಿನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ದೆಹಲಿಯ ತಮ್ಮ ನಿವಾಸದಲ್ಲಿ ನಡೆಯಲಿರುವ ಪೊಂಗಲ್ ಆಚರಣೆಯಲ್ಲಿ ಭಾಗವಹಿಸುವಂತೆ ‘ಪರಾಶಕ್ತಿ’ ಚಿತ್ರತಂಡಕ್ಕೆ ಮುರುಗನ್ ಅವರು ಆಹ್ವಾನ ನೀಡಿದ್ದರು.
ನಟರಾದ ಶಿವಕಾರ್ತಿಕೇಯನ್, ರವಿ ಮೋಹನ್(ಜಯಂ ರವಿ), ಸಂಗೀತ ಸಂಯೋಜಕ ಜಿ.ವಿ. ಪ್ರಕಾಶ್ ಕುಮಾರ್ ಸೇರಿದಂತೆ ಚಿತ್ರತಂಡದ ಹಲವರನ್ನು ಮೋದಿ ಅವರು ಭೇಟಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾದ ಶಿವಕಾರ್ತಿಕೇಯನ್, ಜಯಂ ರವಿ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕಾರ್ತಿಕೇಯನ್, ‘ಪ್ರಧಾನಿ ಅವರನ್ನು ಭೇಟಿಯಾಗಿರುವುದು ಗೌರವ ಮತ್ತು ಸಂತಸ ನೀಡಿದೆ ಎಂದು ಹೇಳಿದ್ದಾರೆ. ‘ದೆಹಲಿಯಲ್ಲಿ ಪೊಂಗಲ್ ಆಚರಿಸಿರುವುದು ಏಕತೆಯ ಸಂದೇಶವನ್ನು ಸಾರಿದೆ’ ಎಂದಿದ್ದಾರೆ.
ರವಿ ಮೋಹನ್ ಮಾತನಾಡಿ, ಪ್ರಧಾನಿ ಅವರು ನಗು ಮುಖದಿಂದ ನಮ್ಮನ್ನು ಸ್ವಾಗತಿಸಿದರು. ಇಲ್ಲಿ ಬಂದು ಹಬ್ಬ ಆಚರಿಸಿರುವುದು ಸಂತೋಷ ತಂದಿದೆ’ ಎಂದು ಹೇಳಿದ್ದಾರೆ.
‘ಇಂದು ದೆಹಲಿಯಲ್ಲಿ ನಡೆದ ಪೊಂಗಲ್ ಆಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎಲ್. ಮುರುಗನ್ ಅವರು ನನ್ನ ಸಂಯೋಜನೆಯ ‘ತಿರುವಾಸಗಂ’ ಹಾಡನ್ನು ಕೇಳಿದರು’ ಎಂದು ಜಿ.ವಿ. ಪ್ರಕಾಶ್ ಕುಮಾರ್ ಎಕ್ಸ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
'ಪರಾಶಕ್ತಿ' ಚಿತ್ರವು 1960ರ ದಶಕದಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧ ನಡೆದ ಪ್ರತಿಭಟನೆಗಳ ಕುರಿತ ಕಥಾಹಂದರವನ್ನು ಹೊಂದಿದೆ. ಚಿತ್ರದಲ್ಲಿ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರನ್ನು ಅವಮಾನಿಸಲಾಗಿದೆ ಎಂದು ತಮಿಳುನಾಡು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು.
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ಕೂಡ ಚಿತ್ರದ ಭಾಗವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.