ADVERTISEMENT

ವಿವಾದಾತ್ಮಕ ಜಾಹೀರಾತು: ಕ್ಷಮೆ ಕೋರಿದ ತನಿಷ್ಕ್ ಆಭರಣ ಸಂಸ್ಥೆ

ಕ್ಷಮೆ ಕೋರುವಂತೆ ಮಳಿಗೆ ಸಿಬ್ಬಂದಿಗೆ ಬೆದರಿಕೆ

ಏಜೆನ್ಸೀಸ್
Published 14 ಅಕ್ಟೋಬರ್ 2020, 18:58 IST
Last Updated 14 ಅಕ್ಟೋಬರ್ 2020, 18:58 IST
ಆಭರಣ ಜಾಹೀರಾತಿನ ದೃಶ್ಯ–ಸಂಗ್ರಹ ಚಿತ್ರ
ಆಭರಣ ಜಾಹೀರಾತಿನ ದೃಶ್ಯ–ಸಂಗ್ರಹ ಚಿತ್ರ   

ಅಹಮದಾಬಾದ್: ‘ಲವ್‌ ಜಿಹಾದ್‌’ಗೆ ಪ್ರೇರಣೆ ನೀಡುತ್ತಿದೆ ಎನ್ನುವ ಆರೋಪದ ಕಾರಣಕ್ಕಾಗಿ ತನ್ನ ಜಾಹೀರಾತನ್ನು ಹಿಂಪಡೆದಿದ್ದ ತನಿಷ್ಕ್ ಆಭರಣ ಸಂಸ್ಥೆಯಿಂದ ಬಲವಂತವಾಗಿ ಕ್ಷಮೆ ಪಡೆಯಲಾಗಿದೆ.

‘ಕಛ್ ಜಿಲ್ಲೆಯ ಗಾಂಧಿಧಾಮ ಪಟ್ಟಣದ ತನಿಷ್ಕ್ ಷೋರೂಂಗೆ ಅ.12ರಂದು ಇಬ್ಬರು ವ್ಯಕ್ತಿಗಳು ಭೇಟಿ ನೀಡಿದ್ದರು. ಅವರಲ್ಲೊಬ್ಬರಾದ ರಮೇಶ್ ಅಹಿರ್ (ಮೈತ್ರ) ಅನ್ನುವವರು ಷೋರೂಂನ ಸಿಬ್ಬಂದಿಗೆ ಕ್ಷಮೆ ಕೋರುವಂತೆ ಹೇಳಿದ್ದರು’ ಎಂದು ಕಛ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಯೂರ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕ್ಷಮೆಯಾಚನೆಗೆ ಒತ್ತಾಯಿಸಿ ಜನರು ಷೋರೂಂ ಬಳಿ ಗುಂಪುಗೂಡಿರಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಅಹಿರ್ಬೆದರಿಕೆಯೊಡ್ಡಿ ಕ್ಷಮಾಪಣೆ ಪತ್ರ ಬರೆಯುವಂತೆ ಬಲವಂತ ಮಾಡಿರುವುದು ಹಾಗೂ ಅದನ್ನು ಷೋರೂಂನ ಮುಂಬಾಗಿನಲ್ಲಿ ಅಂಟಿಸಲು ಸೂಚನೆ ನೀಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.ಷೋರೂಂನ ಸಿಬ್ಬಂದಿ ಅಹಿರ್ ನೀಡಿದ ಸೂಚನೆಯಂತೆ ಕ್ಷಮಾಪಣಾ ಪತ್ರ ಬರೆದಿದೆ. ‘ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ತನಿಷ್ಕ್‌ನ ಅಭಿಯಾನವು ನಾಚಿಕೆಗೇಡಿನ ಸಂಗತಿಯಾಗಿದೆ. ಗಾಂಧಿಧಾಮದ ತನಿಷ್ಕ್ ಮಳಿಗೆಯು, ಸಮಗ್ರ ಕಛ್ ಜಿಲ್ಲೆಯ ಹಿಂದೂ ಸಮಾಜದ ಕ್ಷಮೆ ಕೋರುತ್ತದೆ’ ಎಂದು ಕ್ಷಮಾಪಣಾ ಪತ್ರದಲ್ಲಿ ಬರೆಯಲಾಗಿದೆ.

ಈ ನಡುವೆ ‘ಷೋರೂಂಗೆ ಭೇಟಿ ನೀಡಿ ಕ್ಷಮೆಕೋರಲು ಬಲವಂತಪಡಿಸಿದ್ದೆ’ ಎಂದು ರಮೇಶ್ ಅಹಿರ್ ಸ್ಥಳೀಯ ಮಾಧ್ಯಮವೊಂದಕ್ಕೆ ಧೃಢಪಡಿಸಿದ್ದಾರೆ.

‘ತನಿಷ್ಕ್ ಜಾಹೀರಾತು ನನ್ನ ಧಾರ್ಮಿಕ ಭಾವನೆಗಳ ವಿರುದ್ಧವಾಗಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಕಛ್ ಜಿಲ್ಲೆಯಲ್ಲಿ ಇರುವುದು ಇದೊಂದೇ ಷೋರೂಂ. ಹಾಗಾಗಿ, ನೀವು ಕ್ಷಮೆಯಾಚಿಸಬೇಕೆಂದು ನಾನು ಅವರಿಗೆ ಹೇಳಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಷೋರೂಂ ಮೇಲೆ ದಾಳಿಯಾಗಿದೆ ಎನ್ನುವುದು ಸಂಪೂರ್ಣ ಸುಳ್ಳು. ನಾನೊಬ್ಬ ಸಾಧಾರಣ ವ್ಯಾಪಾರಿ. ವ್ಯಾಪಾರವನ್ನು ಹಾಳು ಮಾಡಲು ನಾನು ಎಂದಿಗೂ ಬಯಸುವುದಿಲ್ಲ. ನನ್ನ ಅಥವಾ ಮತ್ತೊಬ್ಬರ ಧರ್ಮಕ್ಕೆ ಅವಮಾನವಾಗಬಾರದು ಎಂಬುದನ್ನು ಮಾತ್ರ ನಾನು ಬಯಸುವೆ’ ಎಂದು ಅಹಿರ್ ಹೇಳಿದ್ದಾರೆ.

ಬೆದರಿಕೆ ಕರೆ: ‘ಆಭರಣದ ಷೋರೂಂಗೆ ಬೆದರಿಕೆ ಕರೆಗಳು ಬರುತ್ತಿರುವ ಕುರಿತು, ಮಳಿಗೆ ಸಿಬ್ಬಂದಿಯು ಪೊಲೀಸರಿಗೆ ಮಾಹಿತಿ ನೀಡಿದೆ. ಆದರೆ, ಅಧಿಕೃತ ದೂರು ಸಲ್ಲಿಕೆಯಾಗಿಲ್ಲ. ಷೋರೂಂನ ಸುತ್ತಲಿನ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಭದ್ರತೆ ಒದಗಿಸಲಾಗಿದೆ. ಈವರೆಗೆ ಅಹಿತಕರ ಘಟನೆ ನಡೆದಿಲ್ಲ’ ಎಂದು ಎಸ್‌ಪಿ ಮಯೂರ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಏನಿದು ವಿವಾದ?: ಏಕತೆ ವಿಷಯವನ್ನು ಆಧರಿಸಿ ಪ್ರಕಟಿಸಲಾಗಿರುವ ಆಭರಣದ ಜಾಹೀರಾತಿನಲ್ಲಿ ಮುಸ್ಲಿಂ ಕುಟುಂಬದಲ್ಲಿರುವ ಹಿಂದೂ ಮಹಿಳೆಗೆ ಸೀಮಂತ ಕಾರ್ಯಕ್ರಮ ಆಯೋಜಿಸುವ ದೃಶ್ಯಗಳಿದ್ದವು. ಇಡೀ ಕುಟುಂಬ ಹಿಂದೂ ಸಂಪ್ರದಾಯದಂತೆ ಸಿದ್ಧತೆ ಮಾಡಿ ಮಹಿಳೆಗೆ ಸಂತಸ ನೀಡುವ ವಾತಾವರಣದ ದೃಶ್ಯಗಳಿದ್ದವು. ಈ ವಿಡಿಯೊ ಜಾಹೀರಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಅನೇಕ ಕಡೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.