
ಸುವೇಂದು ಅಧಿಕಾರಿ
(ಪಿಟಿಐ ಚಿತ್ರ)
ಕೋಲ್ಕತ್ತ: '2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯದಲ್ಲಿ ಟಾಟಾ ಸಮೂಹದ ಹೂಡಿಕೆಯನ್ನು ಮರಳಿ ತರುತ್ತೇವೆ' ಎಂದು ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಸುವೇಂದು ಅಧಿಕಾರಿ ಹೇಳಿದ್ದಾರೆ.
'ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಲಂಚ ಹಾಗೂ ಭ್ರಷ್ಟಾಚಾರ ಇರುವುದಿಲ್ಲ' ಎಂದು ಅವರು ಭರವಸೆ ನೀಡಿದ್ದಾರೆ.
2008ರಲ್ಲಿ ನಡೆದ ಭಾರಿ ವಿವಾದದ ಬಳಿಕ ಟಾಟಾ ಮೋಟಾರ್ಸ್ ಬಂಗಾಳ ತೊರೆದಿತ್ತು.
ಈ ಕುರಿತು ಪಕ್ಷದ ಸಮಾವೇಶದಲ್ಲಿ ಮಾತನಾಡಿರುವ ಸುವೇಂದು, 'ಕೆಟ್ಟ 'ಎಂ' (ಮಮತಾ) ಬಿಟ್ಟು ಒಳ್ಳೆಯ 'ಎಂ'ಗೆ (ಮೋದಿ) ಹೋಗುತ್ತಿರುವುದಾಗಿ ಅಂದಿನ ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಹೇಳಿದ್ದರು' ಎಂದು ಹೇಳಿದ್ದಾರೆ.
'ಒಎಂಆರ್ ಮೂಲಕ ನಾವು ಪಾರದರ್ಶಕ ಉದ್ಯೋಗವನ್ನು ಖಾತ್ರಿಪಡಿಸಲಿದ್ದೇವೆ. ರಾಜ್ಯದಲ್ಲಿ ಲಂಚ ಹಾಗೂ ಭ್ರಷ್ಟ ಮಧ್ಯವರ್ತಿಗಳು ಇರುವುದಿಲ್ಲ' ಎಂದು ಹೇಳಿದ್ದಾರೆ.
'ರಾಜ್ಯವು 8 ಲಕ್ಷ ಕೋಟಿ ಸಾಲದ ಹೊರೆಯಲ್ಲಿದೆ. 60 ಲಕ್ಷ ವಲಸೆ ಕಾರ್ಮಿಕರಿದ್ದಾರೆ. 2.15 ಕೋಟಿ ನಿರುದ್ಯೋಗಿಗಳಿದ್ದಾರೆ. ಇವೆಲ್ಲವನ್ನು ಹಿಮ್ಮೆಟ್ಟಿಸಿ ಬಂಗಾಳವು ಆರ್ಥಿಕ ಪ್ರಗತಿಯತ್ತ ಸಾಗಲಿದೆ' ಎಂದಿದ್ದಾರೆ.
'ಅಕ್ರಮ ವಲಸಿಗರ ಸಂಬಂಧ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಟಿಎಂಸಿ ನೀಡಿದ ನಕಲಿ ಪಡಿತರ ಹಾಗೂ ಗುರುತಿನ ಚೀಟಿ ಪಡೆದ ಬಾಂಗ್ಲಾದೇಶ, ಮ್ಯಾನ್ಮಾರ್ ಮುಸ್ಲಿಮರನ್ನು ಎಸ್‌ಐಆರ್ ಮೂಲಕ ಪತ್ತೆ ಹಚ್ಚಿ ಗಡೀಪಾರು ಮಾಡಲಾಗುವುದು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.