ನವದೆಹಲಿ: ಟಾಟಾ ಸನ್ಸ್ ಸಂಸ್ಥೆಯಲ್ಲಿ ಪಾರದರ್ಶಕತೆ ತರಲು ಅದನ್ನು ಷೇರುಪೇಟೆಯಲ್ಲಿ ನೋಂದಣಿ ಮಾಡಬೇಕು ಎಂದು ಎಸ್.ಪಿ ಸಮೂಹದ ಮುಖ್ಯಸ್ಥ ಶಾಪೂರ್ಜಿ ಪಲ್ಲೊಂಜಿ ಮಿಸ್ತ್ರಿ ಶುಕ್ರವಾರ ಕರೆ ನೀಡಿದ್ದಾರೆ.
ಟಾಟಾ ಸಂಸ್ಥೆಯ ಮೇಲೆ ನಿಯಂತ್ರಣ ಹೊಂದಿರುವ ಟಾಟಾ ಟ್ರಸ್ಟ್ಸ್‌ನ ಟ್ರಸ್ಟಿಗಳ ನಡುವೆ ಸಂಘರ್ಷ ಏರ್ಪಟ್ಟಿರುವಾಗಲೇ ಪಲ್ಲೊಂಜಿ ಅವರು ಹೀಗೆ ಹೇಳಿದ್ದಾರೆ.
ಟಾಟಾ ಸನ್ಸ್ ಕಂಪನಿಯನ್ನು ಸೆಪ್ಟೆಂಬರ್ 30ರ ಒಳಗಾಗಿ ಷೇರುಪೇಟೆಯಲ್ಲಿ ನೋಂದಾಯಿಸಬೇಕು ಎಂದು ಆರ್‌ಬಿಐ ನೀಡಿರುವ ಗಡುವನ್ನು ಗಂಭೀರವಾಗಿ ಮತ್ತು ಗೌರವಯುತವಾಗಿ ಕಾಣಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಷೇರುಪೇಟೆಯಲ್ಲಿ ಟಾಟಾ ಸನ್ಸ್ ಅನ್ನು ನೋಂದಾಯಿಸಲು ಶಾಪೂರ್ಜಿ ಪಲ್ಲೊಂಜಿ ಸಮೂಹವು ನಿರಂತರವಾಗಿ ಸಲಹೆ ನೀಡುತ್ತಿದೆ. ಈ ಸಂಸ್ಥೆಯನ್ನು ಷೇರುಪೇಟೆಯಲ್ಲಿ ನೋಂದಾಯಿಸುವುದರಿಂದ ಪಾರದರ್ಶಕತೆಯನ್ನು ಎತ್ತಿ ಹಿಡಿದಂತಾಗುತ್ತದೆ. ಅಷ್ಟೇ ಅಲ್ಲದೆ, ಎಲ್ಲಾ ಪಾಲುದಾರರು, ಉದ್ಯೋಗಿಗಳು, ಹೂಡಿಕೆದಾರರು ಮತ್ತು ಭಾರತದ ಜನರ ನಂಬಿಕೆಯೂ ಬಲಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಶಾಪೂರ್ಜಿ ಪಲ್ಲೊಂಜಿ ಕುಟುಂಬವು ಟಾಟಾ ಸನ್ಸ್‌ನಲ್ಲಿ ಶೇಕಡ 18.37ರಷ್ಟು ಷೇರು ಪಾಲು ಹೊಂದಿದೆ. ಟಾಟಾ ಸಮೂಹದ ಕಂಪನಿಗಳ ಮಾಲೀಕತ್ವ ಹೊಂದಿರುವ ಟಾಟಾ ಸನ್ಸ್‌ನಲ್ಲಿ ಶೇಕಡ 66ರಷ್ಟು ಪಾಲು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.