ತವಿ ನದಿಯಲ್ಲಿ ಸಿಲುಕಿದ್ದ 9 ಜನರ ರಕ್ಷಣೆ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಭಾರಿ ಮಳೆಯಾದ ಪರಿಣಾಮ ತವಿ ನದಿಯ ನೀರಿನ ಮಟ್ಟದಲ್ಲಿ ಏಕಾಏಕಿ ಏರಿಕೆಯಾಗಿದ್ದು, ನದಿಯ ಬಳಿ ಸಿಲುಕಿದ್ದ 9 ಜನರನ್ನು ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ಜಂಟಿ ಕಾರ್ಯಾಚರಣೆ ಕೈಗೊಂಡು ರಕ್ಷಿಸಿದ್ದಾರೆ.
ಮಳೆಯ ಪರಿಣಾಮ ಜಮ್ಮು, ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮದನ್ ಲಾಲ್ (52) ಎನ್ನುವವರು ಬುಧವಾರ ಬಳಿಗ್ಗೆ 8.45ರ ಹೊತ್ತಿಗೆ ತವಿ ನದಿಯ ಬಳಿ ಮರಳು ತೆಗೆಯಲು ಹೋಗಿದ್ದರು, ಈ ಸಮಯದಲ್ಲಿ ಏಕಾಏಕಿ ನೀರಿನ ಮಟ್ಟ ಹೆಚ್ಚಳವಾಗಿ ಸುಮಾರು 2 ಗಂಟೆಗಳ ಕಾಲ ಅಲ್ಲಿಯೇ ಸಿಲುಕಿದ್ದರು. ಇವರನ್ನು ಎಸ್‌ಡಿಆರ್‌ಎಫ್ ಸಿಬ್ಬಂದಿ ಸೇತುವೆ ಮೇಲಿನಿಂದ ನದಿಗೆ ಏಣಿಯನ್ನು ಇಳಿಸಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಂಡದಾನಕ್ಕೆ ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಸಿಲಕಿದ್ದರು, ಇವರನ್ನೂ ಸೇರಿ ಇನ್ನೂ ಏಳು ಜನರನ್ನು ರಕ್ಷಿಸಲಾಗಿದೆ. ಅಪಾಯಕ್ಕೆ ಸಿಲುಕಿದ್ದ ಹಲವು ಕುದರೆಗಳನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನದಿ ನೀರಿನ ಮಟ್ಟ ಹೆಚ್ಚಳವಾದ ಕಾರಣ ರಜೌರಿ ಸೇರಿ ಹಲವೆಡೆ ಪ್ರವಾಹ ಸ್ಥಿತಿ ಎದುರಾಗಿದೆ. ಜೂನ್ 27ರವರೆಗೆ ಜಮ್ಮುವಿನಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.