ADVERTISEMENT

ರಾಜಮಹೇಂದ್ರವರಂ ಜೈಲಿಗೆ ಚಂದ್ರಬಾಬು ನಾಯ್ಡು: ಝಡ್‌ ಪ್ಲಸ್‌ ಭದ್ರತೆ

ಪಿಟಿಐ
Published 11 ಸೆಪ್ಟೆಂಬರ್ 2023, 14:06 IST
Last Updated 11 ಸೆಪ್ಟೆಂಬರ್ 2023, 14:06 IST
ರಾಜಮಹೇಂದ್ರವರಂ ಜೈಲಿನಲ್ಲಿ ಬಂಧಿತ ಚಂದ್ರಬಾಬು ನಾಯ್ಡು– ಪಿಟಿಐ ಚಿತ್ರ
ರಾಜಮಹೇಂದ್ರವರಂ ಜೈಲಿನಲ್ಲಿ ಬಂಧಿತ ಚಂದ್ರಬಾಬು ನಾಯ್ಡು– ಪಿಟಿಐ ಚಿತ್ರ   

ರಾಜಮಹೇಂದ್ರವರಂ (ಆಂಧ್ರಪ್ರದೇಶ) : ಹಣ ದುರುಪಯೋಗ ಪ್ರಕರಣದಲ್ಲಿ ಬಂಧಿತರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ಕೇಂದ್ರ ಕಾರಾಗೃಹಕ್ಕೆ ಸೋಮವಾರ ನಸುಕಿನಲ್ಲಿ ಕರೆ ತರಲಾಗಿದೆ. 

ವಿಜಯವಾಡ ನ್ಯಾಯಾಲಯವು ನಾಯ್ಡು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಭಾನುವಾರ ಆದೇಶಿಸಿತ್ತು.

ಸುಮಾರು 200 ಕಿ.ಮೀ. ದೂರದ ವಿಜಯವಾಡದಿಂದ ಪೂರ್ವ ಗೋಧಾವರಿ ಜಿಲ್ಲೆಯ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹಕ್ಕೆ ನಸುಕಿನಲ್ಲಿ 1.20ರ ಸಮಯಕ್ಕೆ ಅವರನ್ನು ಕರೆತರಲಾಯಿತು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಜಗದೀಶ್‌ ತಿಳಿಸಿದರು.

ADVERTISEMENT

73 ವರ್ಷದ ನಾಯ್ಡು ಅವರಿಗೆ ನ್ಯಾಯಾಂಗ ಬಂಧನದ ವೇಳೆ ಮನೆಯ ಊಟ, ವೈದ್ಯಕೀಯ ಸೌಲಭ್ಯ ಮತ್ತು ವಿಶೇಷ ಕೊಠಡಿ ಪಡೆಯಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ. 

ನಾಯ್ಡು ಅವರ ಮಗ ಮತ್ತು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್‌ ತಮ್ಮ ತಂದೆಯನ್ನು ಜೈಲಿನ ಗೇಟಿನವರೆಗೂ ಹಿಂಬಾಲಿಸಿಕೊಂಡು ಬಂದಿದ್ದರು. ಅವರು ಅಲ್ಲಿಂದ ಹೊರಡುವ ಮುನ್ನ ಸ್ವಲ್ಪ ಹೊತ್ತು ಹೊರಗೆ ಕಾದುಕುಳಿತ್ತಿದ್ದರು.

ನಾಯ್ಡು ಅವರಿಗೆ ಜೀವ ಬೆದರಿಕೆ ಇರುವುದರಿಂದ ಜೈಲಿನ ಒಳಗೆ ಅವರಿಗೆ ಪ್ರತ್ಯೇಕ ಕೊಠಡಿ ಒದಗಿಸಲಾಗಿದೆ. ನಾಯ್ಡು ಅವರಿಗೆ ಝಡ್‌ ಪ್ಲಸ್‌ ಭದ್ರತೆ ಕಲ್ಪಿಸಲಾಗಿದೆ.

ಕೌಶಲ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಆರೋಪದ ಮೇಲೆ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಶನಿವಾರ ನಂದ್ಯಾಲದಲ್ಲಿ ಮದುವೆ ಕಾರ್ಯಕ್ರಮದ ಸ್ಥಳದಿಂದ ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.