
ಹಿಮಂತ ಬಿಸ್ವಾ ಶರ್ಮಾ
ಪಟ್ನಾ: 'ಪ್ರಧಾನಿ ನರೇಂದ್ರ ಮೋದಿ 'ರಾಮ-ಲಕ್ಷ್ಮಣ'ರ ಆದರ್ಶಗಳ ಪ್ರತಿಪಾದಕರಾಗಿದ್ದಾರೆ. ಆದರೆ 'ಇಂಡಿಯಾ' ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮತ್ತು ಆರ್‌ಜೆಡಿಯ ವರಿಷ್ಠ ಲಾಲೂ ಪ್ರಸಾದ್ ಅವರು 'ಬಾಬರ್-ಔರಂಗಜೇಬ್' ಅವರನ್ನು ಪ್ರತಿನಿಧಿಸುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂದು (ಬುಧವಾರ) ಆರೋಪಿಸಿದ್ದಾರೆ.
ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, 'ಮುಸ್ಲಿಂ ವ್ಯಕ್ತಿ ಸಿಎಂ ಆಗಬೇಕೆಂದು ಹೇಳಿದ್ದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ರಾಮನನ್ನು ಪೂಜಿಸುವ ಮತ್ತು ಲಕ್ಷ್ಮಣನಂತೆ ಭಕ್ತಿಯುಳ್ಳವನು ಮಾತ್ರ ಬಿಹಾರದ ಮುಖ್ಯಮಂತ್ರಿಯಾಗಲು ಅರ್ಹರು. ಅವರಿಗೆ ಓವೈಸಿ ಸಲಹೆ ಅಗತ್ಯವಿಲ್ಲ. ಬೇಕಿದ್ದಲ್ಲಿ ಅವರಿಗೆ ನಾನು ಪಾಕಿಸ್ತಾನದಲ್ಲಿ ಟಿಕೆಟ್ ಕೊಡಿಸುತ್ತೇನೆ. ಅವರು ಬಯಸಿದ ಜನರು ಆಯ್ಕೆ ಮಾಡಲಿದ್ದಾರೆ' ಎಂದು ತಿರುಗೇಟು ನೀಡಿದ್ದಾರೆ.
'ಪ್ರಧಾನಿ ಮೋದಿ ರಾಮ-ಲಕ್ಷ್ಮಣರ ಆದರ್ಶಗಳ ಪ್ರತಿಪಾದಕರಾಗಿದ್ದಾರೆ. ಮತ್ತೊಂದೆಡೆ ತೇಜಸ್ವಿ ಹಾಗೂ ಲಾಲೂ ಬಾಬರ್-ಔರಂಗಜೇಬ್ ಅವರನ್ನು ಪ್ರತಿನಿಧಿಸುತ್ತಾರೆ. ವಿಧಾನಸಭೆ ಚುನಾವಣೆಯು ಈ ದೃಷ್ಟಿಕೋನಗಳ ನಡುವಣ ಹೋರಾಟವಾಗಿದೆ' ಎಂದು ಹೇಳಿದ್ದಾರೆ.
'ಬಹಳ ದಿನಗಳ ಬಳಿಕ ದೇಶದಲ್ಲಿ ಹಿಂದೂಗಳಿಗೆ ಮುಕ್ತವಾಗಿ ಬದುಕಲು ಸಾಧ್ಯವಾಗುತ್ತಿದೆ. ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬೆಂಬಲಿಸುತ್ತಿರುವ ಮೋದಿ ಅವರಿಂದ ಇದು ಸಾಧ್ಯವಾಗಿದೆ. ಇಲ್ಲಿನ ಜನರು ಎನ್‌ಡಿಎಗೆ ಮತ ಹಾಕುತ್ತಾರೆ ಎಂಬ ನಂಬಿಕೆಯಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.