
ಪಟ್ನಾದಲ್ಲಿ ಭಾನುವಾರ ನಡೆದ ಆರ್‌ಜೆಡಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷದ ನೂತನ ಕಾರ್ಯಾಧ್ಯಕ್ಷರಾಗಿ ತೇಜಸ್ವಿ ಯಾದವ್ ಆಯ್ಕೆಯಾದರು. ವರಿಷ್ಠರಾದ ಲಾಲೂ ಪ್ರಸಾದ್ ಹಾಗೂ ರಾಬ್ರಿ ದೇವಿ ಇದ್ದಾರೆ. ಪಿಟಿಐ ಚಿತ್ರ
ಪಟ್ನಾ: ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಕಾರ್ಯಾಧ್ಯಕ್ಷರಾಗಿ ತೇಜಸ್ವಿ ಯಾದವ್ ಭಾನುವಾರ ಆಯ್ಕೆಯಾಗಿದ್ದಾರೆ.
ನಗರದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಅವರ ಕಿರಿಯ ಪುತ್ರನನ್ನು ಪಕ್ಷದ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಈಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಹಾಗೂ ತೇಜಸ್ವಿ ಯಾದವ್‌ಗೆ ತೀವ್ರ ಮುಖಭಂಗವಾಗಿತ್ತು. ತೇಜಸ್ವಿ ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿದ್ದರು.
ಲಾಲೂ ಪ್ರಸಾದ್, ತೇಜಸ್ವಿ ಯಾದವ್, ಸಂಸದರಾದ ಮಿಸಾ ಭಾರತಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ, ಪಕ್ಷದ ಉತ್ತರಾಧಿಕಾರಿ ಯಾರು ಎಂಬುದನ್ನು ಸ್ಪಷ್ಟಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಜೆಡಿ ‘ಎಕ್ಸ್’ನಲ್ಲಿ ತಿಳಿಸಿದೆ.
ತೇಜಸ್ವಿ ಯಾದವ್ ಬಿಹಾರದ ಮಾಜಿ ಉಪಮುಖ್ಯಮಂತ್ರಿ. ಪ್ರಸ್ತುತ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದ ಪುನರುಜ್ಜೀವನಗೊಳಿಸಲು ಯೋಚಿಸುತ್ತಿರುವೆ ಎಂದು ಶನಿವಾರವಷ್ಟೇ ಯಾದವ್ ಹೇಳಿದ್ದರು.
ಸಂಚುಕೋರರ ಕೈಯಲ್ಲಿ ಆರ್‌ಜೆಡಿ: ಲಾಲೂ ಪುತ್ರಿ
ಕಾರ್ಯಕಾರಿಣಿ ಆರಂಭಕ್ಕೂ ಮುನ್ನವೇ ಲಾಲೂ ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
‘ಪಕ್ಷವು ಒಳನುಸುಳುಕೋರರು ಮತ್ತು ಸಂಚುಕೋರರ ಕೈಗೆ ಜಾರಿದೆ. ಲಾಲೂ ವಾದವನ್ನು ನಾಶಗೊಳಿಸುವುದೇ ಇವರ ಏಕೈಕ ಅಜೆಂಡವಾಗಿದೆ’ ಎಂದು ‘ಎಕ್ಸ್’ನಲ್ಲಿ ಹರಿಹಾಯ್ದಿದ್ದಾರೆ.
ಯಾರೊಬ್ಬರ ಹೆಸರನ್ನು ಪ್ರಸ್ತಾಪಿಸದ ರೋಹಿಣಿ, ‘ಪಕ್ಷದ ನಾಯಕತ್ವದ ಜವಾಬ್ದಾರಿ ಹೊತ್ತವರು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳದೇ ಅಥವಾ ಗೊಂದಲವನ್ನು ಸೃಷ್ಟಿಸುವ ಬದಲು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.