ADVERTISEMENT

ತೆಲಂಗಾಣ: ವಿಧಾನಸಭಾ ಚುನಾವಣೆಯ ಅಧಿಸೂಚನೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 20:15 IST
Last Updated 11 ನವೆಂಬರ್ 2018, 20:15 IST

ಹೈದರಾಬಾದ್‌: 119 ಸದಸ್ಯ ಬಲದ ತೆಲಂಗಾಣ ವಿಧಾನಸಭಾ ಚುನಾವಣೆಯ ಅಧಿಸೂಚನೆ ಪ್ರಕಟವಾಗುವುದರೊಂದಿಗೆ ಪ್ರಕ್ರಿಯೆ ಸೋಮವಾರ (ನ. 12) ಆರಂಭವಾಗಲಿದೆ.‌

ಒಂದೇ ಹಂತದಲ್ಲಿ ಡಿಸೆಂಬರ್‌ 7ರಂದು ಮತದಾನ ನಡೆಯಲಿದೆ. 19ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಅವಧಿಗೂ ಮುನ್ನವೇ ಸೆಪ್ಟೆಂಬರ್‌ 6ರಂದು ವಿಧಾನಸಭೆ ವಿಸರ್ಜಿಸಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಚುನಾವಣೆಗೆ ದಾರಿ ಮಾಡಿಕೊಟ್ಟರು. ಈಗ ಚುನಾವಣಾ ಕಣ ರಂಗೇರಿದೆ. ಅಧಿಕಾರ ಉಳಿಸಿಕೊಳ್ಳಲು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪ್ರಯತ್ನ ನಡೆಸಿದ್ದರೆ, ಕಾಂಗ್ರೆಸ್‌ ಮೈತ್ರಿಕೂಟ ತೀವ್ರ ಪೈಪೋಟಿ ನೀಡಿದೆ.

ಟಿಆರ್‌ಎಸ್‌ 107 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಪ್ರಚಾರ ಆರಂಭಿಸಿದೆ. 2014ರ ಚುನಾವಣೆಯಲ್ಲಿ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಜೊತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಈಗ ಏಕಾಂಗಿಯಾಗಿ ಸ್ಪರ್ಧಿಸಿದೆ. ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಟಿಡಿಪಿ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಕೈಜೋಡಿಸಿದೆ.

ADVERTISEMENT

ಕಾಂಗ್ರೆಸ್‌ ಪಕ್ಷವು ಟಿಡಿಪಿ, ತೆಲಂಗಾಣ ಜನ ಸಮಿತಿ (ಟಿಜೆಎಸ್‌) ಹಾಗೂ ಸಿಪಿಐ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಟಿಡಿಪಿಗೆ 14 ಕ್ಷೇತ್ರಗಳು, ಟಿಜೆಎಸ್‌ಗೆ 8 ಹಾಗೂ ಸಿಪಿಐಗೆ ಮೂರು ಕ್ಷೇತ್ರಗಳನ್ನು ನೀಡುವುದಾಗಿ ಕಾಂಗ್ರೆಸ್‌ ಕಳೆದ ವಾರ ಪ್ರಕಟಿಸಿದೆ. ಕಾಂಗ್ರೆಸ್‌ ಜೊತೆಗೆ ಮಾತುಕತೆ ನಡೆಸಿರುವ ಟಿಜೆಎಸ್‌, ತಮ್ಮ ಆಯ್ಕೆಯ ಕ್ಷೇತ್ರಗಳನ್ನೇ ಬಿಟ್ಟು ಕೊಡುವಂತೆ ಒತ್ತಡ ಹಾಕುತ್ತಿದೆ. ಐದು ಕ್ಷೇತ್ರಗಳನ್ನು ನೀಡುವಂತೆ ಸಿಪಿಐ ಒತ್ತಾಯಿಸಿದೆ.

ರಾಜಸ್ಥಾನ: ಇಂದಿನಿಂದ ನಾಮಪತ್ರ

ಡಿಸೆಂಬರ್‌ 7ರಂದು ನಡೆಯುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಸೋಮವಾರ ಆರಂಭವಾಗಲಿದೆ.

ನಾಮಪತ್ರ ಸಲ್ಲಿಕೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ಸಮಯ ನಿಗದಿಪಡಿಸಲಾಗಿದ್ದು, ನವೆಂಬರ್‌ 19 ಕೊನೆಯ ದಿನ. ನ. 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ. 22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.