ಆಂಧ್ರ ಪ್ರದೇಶದಿಂದ ಪ್ರತ್ಯೇಕಗೊಂಡ ಬಳಿಕ ತೆಲಂಗಾಣ ವಿಧಾನಸಭೆಗೆ ನಡೆದಿರುವ ಎರಡನೇ ಚುನಾವಣೆ ಕುತೂಹಲದ ಕಣವಾಗಿತ್ತು. ಪ್ರತ್ಯೇಕ ರಾಜ್ಯ ಹೋರಾಟ ಮುನ್ನಡೆಸಿದ್ದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) 2014ರ ಚುನಾವಣೆಯಲ್ಲಿ ಸರಳ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತಾದರೂ, ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೃಷ್ಟಿಸಿಕೊಂಡಿರುವ ‘ಪ್ರಜಾಕೂಟ’ 2018ರ ಚುನಾವಣೆಯಲ್ಲಿ ಟಿಆರ್‌ಎಸ್‌ಗೆ ಸವಾಲಿನ ಹಾದಿಯನ್ನು ಸೃಷ್ಟಿಸಿತ್ತು. ಈಗಾಲೇ 40 ಕೇಂದ್ರಗಳಲ್ಲಿ ಮತಎಣಿಕೆ ಚುರುಕುಗೊಂಡಿದ್ದು, ಟಿಆರ್‌ಎಸ್ 86 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಅಂಚೆ ಮತಗಳ ಎಣಿಕೆಯೊಂದಿಗೆ ಪ್ರಾರಂಭವಾದ ಮತಎಣಿಕೆಯಲ್ಲಿ ಪ್ರಾರಂಭದಿಂದಲೂ ಕೆ.ಚಂದ್ರಶೇಖರ್ ರಾವ್(ಕೆಸಿಆರ್) ನೇತೃತ್ವದ ಟಿಆರ್‌ಎಸ್ ಮುನ್ನಡೆ ಕಾಯ್ದುಕೊಂಡಿದೆ. ಪ್ರಜಾಕೂಟದ ನೇತೃತ್ವ ವಹಿಸಿರುವ ಕಾಂಗ್ರೆಸ್ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿತ್ತು. ಕಳೆದ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್, ಈಗ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ಇನ್ನೂ ಕಳೆದ ಬಾರಿ 5 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ 5 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಈಗಾಗಲೇ ಟಿಆರ್‌ಎಸ್‌ಗೆ ಬೆಂಬಲ ಘೋಷಿಸಿರುವ ಎಐಎಂಐಎಂನ ಅಸಾದುದ್ದೀನ್ ಓವೈಸಿ ಚಾಂದ್ರಾಯಣಗುಟ್ಟ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದಾರೆ.
ತೆಲಂಗಾಣದಲ್ಲಿ ಸರ್ಕಾರ ರಚನೆಗೆ ಪಕ್ಷವೊಂದು ಕನಿಷ್ಠ 60 ಸ್ಥಾನಗಳಲ್ಲಿ ಜಯಗಳಿಸಬೇಕಿದ್ದು, ಟಿಆರ್‌ಎಸ್ ಈಗಾಗಲೇ 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕೆಂಗುಲಾಬಿ ಪಸರಿಸಿದೆ. ಗಜ್ವೆಲ್‌ನಲ್ಲಿ ಕೆ.ಚಂದ್ರಶೇಖರ್ ರಾವ್ 5000ಕ್ಕೂ ಹೆಚ್ಚು ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ. ಟಿಡಿಪಿ ಅಭ್ಯರ್ಥಿ, ಮಾಜಿ ಸಂಸದ ನಾಮಾ ನಾಗೇಶ್ವರ ರಾವ್ ಖಮ್ಮಂ ಕ್ಷೇತ್ರದಲ್ಲಿ ಟಿಆರ್‌ಎಸ್‌ನ ಪುವ್ವಾಡ ಅಜಯ್ ಕುಮಾರ್ ವಿರುದ್ಧ ಹಿನ್ನಡೆ ಸಾಧಿಸಿದ್ದಾರೆ.
ಈವರೆಗಿನ ಮುನ್ನಡೆ ಫಲಿತಾಂಶದ ಪ್ರಕಾರ ಟಿಆರ್‌ಎಸ್ ಬಹುಮತ ಪಡೆಯುವುದು ಬಹುತೇಕ ಖಚಿತವಾಗಿದ್ದು, ಮತ್ತೆ ಟಿಆರ್‌ಎಸ್ ಸರ್ಕಾರ ರಚಿಸುವುದು ಖಚಿತ ಎಂದು ಟಿಆರ್‌ಎಸ್ ಸಂಸದೆ, ಕೆಸಿಆರ್ ಪುತ್ರಿ ಕೆ.ಕವಿತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ’ತೆಲಂಗಾಣದ ಜನತೆ ನಮ್ಮೊಂದಿಗಿದ್ದಾರೆ. ನಮಗೆ ದೊರೆತಿದ್ದ ಅವಕಾಶವನ್ನು ಸೂಕ್ತ ರೀತಿ ಬಳಸಿ ಪ್ರಾಮಾಣಿಕ ಕೆಲಸ ಮಾಡಿದ್ದೇವ. ಹೀಗಾಗಿ, ಮತದಾರರು ನಮ್ಮನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ, ಅದು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲಿದ್ದೇವೆ’ ಎಂದಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನ ನಡೆದಿರುವ ಪಂಚ ರಾಜ್ಯ ಚುನಾವಣೆಗಳನ್ನು ಸೆಮಿಫೈನಲ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಡಿಸೆಂಬರ್ 7ರಂದು ತೆಲಂಗಾಣದ 119 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಸೋಮವಾರ ಟಿಆರ್‌ಎಸ್‌ನ ಕೆ.ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿದ್ದ ಎಐಎಂಐಎಂನ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ತನ್ನ ಬೆಂಬಲವನ್ನು ಸೂಚಿಸಿದ್ದರು. ಎಐಎಂಐಎಂ 2014ರಲ್ಲಿ 7 ಸ್ಥಾನಗಳನ್ನು ಪಡೆದುಕೊಂಡಿತ್ತು.
ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದಲ್ಲಿ ತೆಲುಗು ದೇಶಂ ಪಾರ್ಟಿ(ಟಿಡಿಪಿ), ಕಮ್ಯುನಿಸ್ಟ್ ಪಾರ್ಟಿ(ಸಿಪಿಐ) ಹಾಗೂ ತೆಲಂಗಾಣ ಜನ ಸಮಿತಿ(ಟಿಜೆಎಸ್) ಮಹಾ ಮೈತ್ರಿ ಮಾಡಿಕೊಂಡು ಪ್ರಜಾಕೂಟ ರಚಿಸಿಕೊಂಡಿವೆ. ಯಾವುದೇ ಒಂದು ಪಕ್ಷ ಸ್ಪಷ್ಟ ಬಹುಮತ ಸಾಧಿಸದಿದ್ದಲ್ಲಿ ಸರ್ಕಾರ ರಚನೆಯಲ್ಲಿ ಪ್ರಜಾಕೂಟ ನಿರ್ಣಾಯಕ ಪಾತ್ರವಹಿಸಲಿದೆ.
ಮುಂದಿನ ಸರ್ಕಾರ ರಚನೆಯಲ್ಲಿ ಬಿಜೆಪಿ ಪ್ರಮುಖ ಪಾತ್ರವಹಿಸಲಿದೆ ಎಂದಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಲಕ್ಷ್ಮಣ್, 'ಎಐಎಂಐಎಂನೊಂದಿಗೆ ಟಿಆರ್‌ಎಸ್ ಮೈತ್ರಿ ಮಾಡಿಕೊಳ್ಳದಿದ್ದಲ್ಲಿ ನಾವು ಟಿಆರ್‌ಎಸ್‌ಗೆ ಬೆಂಬಲ ನೀಡಲಿದ್ದೇವೆ’ ಎಂದು ಸೋಮವಾರ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.