ADVERTISEMENT

Telangana Bus Accident: ಒಂದೇ ಕುಟುಂಬದ ಮೂವರು ಸಹೋದರಿಯರ ದುರಂತ ಸಾವು..

ಪಿಟಿಐ
Published 3 ನವೆಂಬರ್ 2025, 15:51 IST
Last Updated 3 ನವೆಂಬರ್ 2025, 15:51 IST
   

ಹೈದರಾಬಾದ್: ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 6.15ರ ವೇಳೆಗೆ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿಯೊಂದು (ಟಿಪ್ಪರ್‌) ತೆಲಂಗಾಣ ಸಾರಿಗೆ ಸಂಸ್ಥೆ ಬಸ್‌ಗೆ ಡಿಕ್ಕಿ ಹೊಡೆದು 19 ಮಂದಿ ಮೃತಪಟ್ಟಿದ್ದಾರೆ. ಆ ನತದೃಷ್ಟ 19 ಜನರಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರೂ ಸೇರಿದ್ದಾರೆ.

ಯೆಲ್ಲಯ್ಯ ಗೌಡ್‌ ಎಂಬುವವರ ಮೂವರು ಪುತ್ರಿಯರಾದ ತನುಷಾ, ಸಾಯಿಪ್ರಿಯಾ ಮತ್ತು ನಂದಿನಿ ಮೃತರು.

ಯೆಲ್ಲಯ್ಯ ಅವರು, ಇಂದು ಮುಂಜಾನೆ ತಂಡೂರ್‌ ಬಸ್ ನಿಲ್ದಾಣದಲ್ಲಿ ತಮ್ಮ ಮೂವರು ಪುತ್ರಿಯರನ್ನು ಬಸ್‌ ಹತ್ತಿಸಿದ್ದರು. ಆದರೆ ಮಕ್ಕಳನ್ನು ಬೀಳ್ಕೊಟ್ಟ ಅವರಿಗೆ, ಇದು ತಮ್ಮ ಮಕ್ಕಳ ಅಂತಿಮ ಭೇಟಿ ಎಂದು ತಿಳಿದಿರಲಿಲ್ಲ.

ADVERTISEMENT

ಯೆಲ್ಲಯ್ಯ ಗೌಡ ಅವರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾಯಿಪ್ರಿಯಾ ಮೂರನೇ ವರ್ಷದ ಬಿಎಸ್‌ಸಿ ವಿದ್ಯಾರ್ಥಿನಿ. ನಂದಿನಿ ಮೊದಲ ವರ್ಷದ ಬಿಕಾಂ ವಿದ್ಯಾರ್ಥಿನಿ, ತನುಷಾ ಪದವಿ ಮುಗಿಸಿ, ಅರೆಕಾಲಿಕ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

ಇನ್ನು ಹಿರಿಯ ಸಹೋದರಿ, ಅಕ್ಟೋಬರ್ 17ರಂದು ವಿವಾಹವಾಗಿದ್ದರು. ಮೂವರು ಸಹೋದರಿಯ ಮದುವೆಯಲ್ಲಿ ಭಾಗವಹಿಸಿ ಹೈದರಾಬಾದ್‌ಗೆ ತೆರಳಿದ್ದರು.

ಕುಟುಂಬ ಸ್ನೇಹಿತನ ಮದುವೆಯಲ್ಲಿ ಭಾಗವಹಿಸಲು ಈ ಮೂವರು ಸಹೋದರಿಯರು ಮತ್ತೆ ತಂಡೂರ್‌ಗೆ ಬಂದಿದ್ದರು. ಮದುವೆಗೆ ಮಕ್ಕಳನ್ನು ಕರೆಯಬೇಡ ಎಂದು ನಾನು ನನ್ನ ಪತ್ನಿಗೆ ಹೇಳಿದ್ದೆ. ಆದರೆ, ಅವಳು ನನಗೆ ತಿಳಿಯದೆ ಅವರಿಗೆ ಕರೆ ಮಾಡಿದ್ದರು ಎಂದು ಯೆಲ್ಲಯ್ಯ ಗೌಡ ಅವರು ಕಣ್ಣೀರಾದರು.

ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 6.15ರ ವೇಳೆಗೆ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿಯೊಂದು (ಟಿಪ್ಪರ್‌) ತೆಲಂಗಾಣ ಸಾರಿಗೆ ಸಂಸ್ಥೆ ಬಸ್‌ಗೆ ಡಿಕ್ಕಿ ಹೊಡೆದು 19 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ.

‘ವಿಕಾರಾಬಾದ್‌ ಜಿಲ್ಲೆಯ ತಂಡೂರ್‌ ಪಟ್ಟಣದಿಂದ ಹೈದರಾಬಾದ್‌ಗೆ ಬಸ್‌ ತೆರಳುತ್ತಿತ್ತು. ಚೆವೆಲ್ಲಾದ ಮಿರ್ಜಾಗುಡದಲ್ಲಿ ನಡೆದ ಅಪಘಾತದ ಬಳಿಕ ಟಿಪ್ಪರ್‌ನಲ್ಲಿದ್ದ ಜಲ್ಲಿಕಲ್ಲುಗಳು ಬಸ್‌ಗೆ ಒಳಗೆ ತೂರಿಹೋಗಿವೆ. ಇದರಿಂದ ಪ್ರಯಾಣಿಕರು ಹೊರಬರಲು ಸಾಧ್ಯವಾಗದೇ, ಸಿಲುಕಿಕೊಂಡರು. ನಂತರ, ರಕ್ಷಣಾ ಕಾರ್ಯಕರ್ತರು ಭಾರೀ (ಜೆಸಿಬಿ) ಯಂತ್ರ ಬಳಸಿ, ಅವರನ್ನು ಹೊರತಂದರು. 19 ಮಂದಿ ಮೃತರಲ್ಲಿ ಒಂದು ಹೆಣ್ಣು ಮಗು ಸೇರಿದಂತೆ 13 ಮಂದಿ ಮಹಿಳೆಯರು ಸೇರಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಅಪಘಾತದಲ್ಲಿ ಟಿಪ್ಪರ್‌ ಹಾಗೂ ಬಸ್‌ನ ಚಾಲಕರು ಮೃತಪಟ್ಟಿದ್ದಾರೆ’ ಎಂದು ಸೈಬರಾಬಾದ್‌ನ ಪೊಲೀಸ್‌ ಕಮಿಷನರ್‌ ಅವಿನಾಶ್‌ ಮೊಹಾಂತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.