ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ನೇತೃತ್ವದಲ್ಲಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಯಿತು
–ಪಿಟಿಐ ಚಿತ್ರ
ನವದೆಹಲಿ: ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸುವ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ ಹಾಕುವಂತೆ ಒತ್ತಾಯಿಸಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದಲ್ಲಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಶಿಕ್ಷಣ, ಉದ್ಯೋಗ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದವರಿಗೆ ಶೇ 42ರಷ್ಟು ಮೀಸಲಾತಿ ಕಲ್ಪಿಸುವ ಎರಡು ಮಸೂದೆಗಳು ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ತೆಲಂಗಾಣ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಅಂಗೀಕಾರಗೊಂಡಿತ್ತು. ಮಸೂದೆಗಳನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದ್ದು, ರಾಷ್ಟ್ರಪತಿ ಅಂಕಿತವಷ್ಟೇ ಬಾಕಿ ಇದೆ.
‘ಜಾತಿಗಣತಿಗೆ ರಾಜ್ಯ ಸಚಿವ ಸಂಪುಟ, ವಿಧಾನಮಂಡಲ ಮತ್ತು ಜನರಿಂದ ಅನುಮೋದನೆ ದೊರೆತಿದೆ. ಚುನಾಯಿತ ರಾಜ್ಯ ಸರ್ಕಾರವೊಂದು ಕೈಗೊಂಡ ನಿರ್ಧಾರವನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸಲು ಹೇಗೆ ಸಾಧ್ಯ’ ಎಂದು ರೇವಂತ್ ರೆಡ್ಡಿ ಪ್ರಶ್ನಿಸಿದರು.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ವಿರೋಧಿಯಾಗಿದೆ. ಹೀಗಾಗಿಯೇ ಮಸೂದೆಗಳನ್ನು ತಡೆ ಹಿಡಿಯುತ್ತಿದೆ’ ಎಂದು ಆರೋಪಿಸಿದರು.
‘ನಾವು ಹಿಂದುಳಿದ ವರ್ಗಗಳ ಪರ. ರಾಹುಲ್ ಗಾಂಧಿಯೂ ಹಿಂದುಳಿದ ವರ್ಗಗಳ ಪರ. ಪ್ರಧಾನಿ ಮೋದಿ ಹಿಂದುಳಿದ ವರ್ಗಗಳ ವಿರೋಧಿ. ಅವರು ಈ ಬಾರಿ ಮೀಸಲಾತಿ ಹೆಚ್ಚಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಸೋಲಿಸುತ್ತೇವೆ. ಜಾತಿ ಗಣತಿಯ ಬಗ್ಗೆ ಬಗ್ಗೆ ಮೋದಿ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.