ADVERTISEMENT

ತೆಲಂಗಾಣದ ಕಾಂಗ್ರೆಸ್ ಹಿರಿಯ ನಾಯಕ ವಿ. ಹನುಮಂತ ರಾವ್ ಅವರಿಗೆ ಕೋವಿಡ್-19 ದೃಢ

ಏಜೆನ್ಸೀಸ್
Published 21 ಜೂನ್ 2020, 10:24 IST
Last Updated 21 ಜೂನ್ 2020, 10:24 IST
ತೆಲಂಗಾಣ ಕಾಂಗ್ರೆಸ್ ಹಿರಿಯ ನಾಯಕ ವಿ. ಹನುಮಂತ ರಾವ್
ತೆಲಂಗಾಣ ಕಾಂಗ್ರೆಸ್ ಹಿರಿಯ ನಾಯಕ ವಿ. ಹನುಮಂತ ರಾವ್   

ಹೈದರಾಬಾದ್: ರಾಜಕೀಯ ವಲಯಗಳಲ್ಲಿ ವಿಹೆಚ್ ಎಂದೇ ಜನಪ್ರಿಯರಾಗಿರುವ ಎಐಸಿಸಿಯ ತೆಲಂಗಾಣ ಕಾರ್ಯದರ್ಶಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ವಿ. ಹನುಮಂತ ರಾವ್ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರನ್ನು ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಭಾನುವಾರ ಕರೆದೊಯ್ಯಲಾಗಿದೆ.

ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸ್ವತಃ ಹನುಮಂತ ರಾವ್ ಅವರೇ ಪರೀಕ್ಷೆಗೆ ಒಳಗಾದ ಬಳಿಕ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಾಂಕ್ರಾಮಿಕ ರೋಗದ ಮಧ್ಯೆಯೇ ಹಿರಿಯ ಕಾಂಗ್ರೆಸ್ ನಾಯಕ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಅವರು ಮುಂಚೂಣಿಯಲ್ಲಿದ್ದ ಆರೋಗ್ಯ ಕಾರ್ಯಕರ್ತರು ಮತ್ತು ನಿರ್ಗತಿಕರಿಗೆ ಪಡಿತರ, ಸ್ಯಾನಿಟೈಸೇಶನ್ ಕಿಟ್‌ಗಳನ್ನು ವಿತರಿಸುತ್ತಿದ್ದರು.

ವಿ. ಹನುಮಂತ ರಾವ್ ಅವರು ಕೋವಿಡ್-19 ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಸಹ ನಡೆಸಿದ್ದರು. ನೀರಾವರಿ ಯೋಜನೆಗಳ ಬಗ್ಗೆ ತೆಲಂಗಾಣ ಸರ್ಕಾರದ ವಿರುದ್ಧ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಭಟನೆಯ ಭಾಗವಾಗಿದ್ದ ವಿಹೆಚ್ ಅವರು, ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಕಾಣಿಸಿಕೊಂಡಿದ್ದರು.

ADVERTISEMENT

ಆಸ್ಪತ್ರೆಯಲ್ಲಿ ಭದ್ರತೆ ಮತ್ತು ಸುರಕ್ಷತಾ ಸಲಕರಣೆಗಳ ಕೊರತೆಯನ್ನು ವಿರೋಧಿಸಿ ಕಿರಿಯ ವೈದ್ಯರು ನಡೆಸುತ್ತಿದ್ದ ಪ್ರತಿಭಟನೆ ಪರವಾಗಿ ನಿಲ್ಲಲು ವಿಹೆಚ್‌ ಅವರು ಗಾಂಧಿ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಗೆ ಬೆಂಬಲ ಸೂಚಿದ್ದರು. ಈ ವೇಳೆಯೇ ಅವರಿಗೆ ವೈರಸ್ ತಗುಲಿರಬಹುದು ಎನ್ನುವ ಊಹಾಪೋಹಗಳು ಹರಡಿವೆ.

ವಿಹೆಚ್‌ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಅವರ ಒಡನಾಟದಲ್ಲಿದ್ದ ಎಲ್ಲರನ್ನೂ ಸೆಲ್ಫ್ ಕ್ವಾರಂಟೈನ್‍‌ಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.