ನ್ಯಾಯಾಲಯ ತೀರ್ಪು
ಹೈದರಾಬಾದ್: 2013ರಲ್ಲಿ ನಡೆದಿದ್ದ ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣದ ಐವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.
ಎನ್‌ಐಎ (ವಿಚಾರಣಾ) ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ನಿಷೇಧಿತ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್‌ನ(ಐಎಂ) ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಕೆ.ಲಕ್ಷ್ಮಣ್, ಪಿ.ಶ್ರೀ ಸುಧಾ ಅವರನ್ನು ಒಳಗೊಂಡ ಪೀಠ ಈ ಅರ್ಜಿಯನ್ನು ತಿರಸ್ಕರಿಸಿದೆ.
ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಅಪರಾಧಿಗಳ ಪರ ವಕೀಲರು ತಿಳಿಸಿದ್ದಾರೆ.
2013ರ ಫೆ.21ರಂದು ಹೈದರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ಎರಡು ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ 18 ಮಂದಿ ಮೃತಪಟ್ಟು, 131 ಮಂದಿ ಗಾಯಗೊಂಡಿದ್ದರು. ಆರಂಭದಲ್ಲಿ ನಗರ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿಯನ್ನು ಬಂಧಿಸಿದ್ದ ಎನ್‌ಐಎ, ಅಪರಾಧಿಗಳ ವಿರುದ್ಧ 4000 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿತ್ತು.
2016ರ ಡಿಸೆಂಬರ್ 13ರಂದು ಎನ್ಐಎ ನ್ಯಾಯಾಲಯವು ಐಎಂ ಸಹ ಸಂಸ್ಥಾಪಕ ಮೊಹಮ್ಮದ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್, ಪಾಕಿಸ್ತಾನ ಪ್ರಜೆ ಜಿಯಾ-ಉರ್-ರಹಮಾನ್ ಅಲಿಯಾಸ್ ವಕಾಸ್, ಅಸಾದುಲ್ಲಾ ಅಖ್ತರ್, ತಹಸೀನ್ ಅಖ್ತರ್ ಅಲಿಯಾಸ್ ಮೋನು ಮತ್ತು ಅಜಾ ಸೇರಿದಂತೆ ಐವರನ್ನು ದೋಷಿಗಳೆಂದು ಘೋಷಿಸಿತ್ತು.
2016ರ ಡಿ.13ರಂದು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.