
ಹೈದರಾಬಾದ್: ತೆಲಂಗಾಣದ ಜಗಿತ್ಯಾಲ ಜಿಲ್ಲೆಯ 80 ವರ್ಷದ ವ್ಯಕ್ತಿಯೊಬ್ಬರು ಬದುಕಿರುವಾಗಲೇ ತಮ್ಮ ಸಮಾಧಿಯನ್ನು ನಿರ್ಮಿಸಿಕೊಂಡಿದ್ದಾರೆ.
ನಕ್ಕಾ ಇಂದ್ರಯ್ಯ ಅವರು, ಜಿಲ್ಲೆಯ ಲಕ್ಷ್ಮಿಪುರಂ ಗ್ರಾಮದಲ್ಲಿ ತಮ್ಮ ಪತ್ನಿಯ ಸಮಾಧಿಯ ಪಕ್ಕದಲ್ಲಿಯೇ ತಮ್ಮ ಸಮಾಧಿಯನ್ನು ನಿರ್ಮಿಸಿಕೊಂಡಿದ್ದಾರೆ. ಸಮಾಧಿ ಪಕ್ಕದಲ್ಲಿ ಜೀವನ ಮತ್ತು ಮರಣದ ಕಹಿ ಸತ್ಯದ ಕುರಿತ ಸಂದೇಶವಿರುವ ಫಲಕವನ್ನು ಹಾಕಿದ್ದಾರೆ. ಅದರಲ್ಲಿ ‘ಮರಣ ಅನಿವಾರ್ಯ. ಸತ್ತ ನಂತರ ಯಾರೂ ಸಂಪತ್ತನ್ನು ಕೊಂಡೊಯ್ಯುವುದಿಲ್ಲ’ ಎಂದು ಬರೆಯಲಾಗಿದೆ.
ಗ್ರಾನೈಟ್‌ನಲ್ಲಿ ನಿರ್ಮಿಸಲಾದ ಸಮಾಧಿಗೆ ಒಟ್ಟು ₹12 ಲಕ್ಷ ವೆಚ್ಚವಾಗಿದೆ.
ಪ್ರತಿನಿತ್ಯ ಸಮಾಧಿ ಇರುವ ಸ್ಥಳಕ್ಕೆ ಬಂದು ಸ್ಥಳವನ್ನುಸ್ವಚ್ಛಗೊಳಿಸುವುದು, ಗಿಡಗಳಿಗೆ ನೀರುಣಿಸುವುದು ಹಾಗೇ ಅಲ್ಲಿಯೇ ಕೆಲ ಕಾಲ ಕುಳಿತು ಸಮಯ ಕಳೆಯುವುದು ದಿನಚರಿಯಾಗಿದೆ ಎಂದು ಇಂದ್ರಯ್ಯ ಹೇಳಿದ್ದಾರೆ.
‘ನಾನು ನಾಲ್ಕೈದು ಮನೆಗಳು, ಒಂದು ಶಾಲೆ, ಒಂದು ಚರ್ಚ್ ಕಟ್ಟಿದ್ದೇನೆ. ಈಗ ನನ್ನ ಸಮಾಧಿಯನ್ನೂ ನಿರ್ಮಿಸಿದ್ದೇನೆ. ಸಮಾಧಿಯ ನಿರ್ಮಾಣ ಹಲವರಿಗೆ ನೋವುಂಟು ಮಾಡಬಹುದು, ಆದರೆ ನನಗೆ ಸಂತೋಷವನ್ನು ನೀಡಿದೆ. ನನ್ನ ಮರಣದ ನಂತರ ಮಕ್ಕಳಿಗೆ ತೊಂದರೆ ಕೊಡಬಾರದೆಂದು ನಾನೇ ನಿರ್ಮಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.