ADVERTISEMENT

Telangana Explosion | ಔಷಧ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ: ಎಫ್‌ಐಆರ್ ದಾಖಲು

ಪಿಟಿಐ
Published 1 ಜುಲೈ 2025, 13:19 IST
Last Updated 1 ಜುಲೈ 2025, 13:19 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ಸಂಗಾರೆಡ್ಡಿ (ತೆಲಂಗಾಣ): ಇಲ್ಲಿನ ಔಷಧ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ್ದ ಸ್ಫೋಟ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ.

ಸ್ಫೋಟದಲ್ಲಿ 36 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ಮಂಗಳವಾರ ತಿಳಿಸಿದ್ದಾರೆ.

ADVERTISEMENT

ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯ ರಿಯಾಕ್ಟರ್‌ನಲ್ಲಿ ರಾಸಾಯನಿಕ ವಸ್ತುವಿಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ಮೂಲಗಳು ಹೇಳಿವೆ.

ಸೋಮವಾರ ಬೆಳಿಗ್ಗೆ 9.28ರಿಂದ 9.35ರ ನಡುವೆ ಸ್ಫೋಟ ಸಂಭವಿಸಿದೆ. ಈ ವೇಳೆ ಕಾರ್ಖಾನೆಯಲ್ಲಿ 150 ಮಂದಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಸುಮಾರು 90 ಮಂದಿ ಸ್ಫೋಟ ನಡೆದ ಸ್ಥಳದ ಸಮೀಪದಲ್ಲೇ ಇದ್ದರು ಎಂದು ಕಾರ್ಖಾನೆಯ ಮೂಲಗಳನ್ನು ಉಲ್ಲೇಖಿಸಿ ಐಜಿಪಿ ವಿ.ಸತ್ಯನಾರಾಯಣ ಹೇಳಿದ್ದಾರೆ.

ಈ ಪ್ರಕರಣ ಸಂಬಂಧ ಬಿಎನ್‌ಎಸ್‌ನ ಸೆಕ್ಷನ್ 105(ಉದ್ದೇಶವಿಲ್ಲದ ನರಹತ್ಯೆ), 110(ಕೊಲೆ ಯತ್ನ) ಮತ್ತು 117ರ(ಸ್ವಯಂಪ್ರೇರಣೆಯಿಂದ ಗಂಭೀರ ಗಾಯ ಉಂಟು ಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ತನಿಖೆ ಮುಂದುವರಿದೆ ಎಂದು ಪಂಕಜ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಘಟನೆಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಔಷಧ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತೆಲಂಗಾಣದ ಕಾರ್ಖಾನೆಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.