ADVERTISEMENT

ತೆಲಂಗಾಣ | ಔಷಧ ಕಾರ್ಖಾನೆಯಲ್ಲಿ ಸ್ಫೋಟ: ಮೃತರ ಸಂಖ್ಯೆ 36ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
ಪಿಟಿಐ
Published 1 ಜುಲೈ 2025, 16:09 IST
Last Updated 1 ಜುಲೈ 2025, 16:09 IST
ದುರಂತದಲ್ಲಿ ಮೃತಪಟ್ಟವರೊಬ್ಬರ ಕುಟುಂಬದ ಸದಸ್ಯರು ರೋದಿಸಿದರು –ಪಿಟಿಐ ಚಿತ್ರ
ದುರಂತದಲ್ಲಿ ಮೃತಪಟ್ಟವರೊಬ್ಬರ ಕುಟುಂಬದ ಸದಸ್ಯರು ರೋದಿಸಿದರು –ಪಿಟಿಐ ಚಿತ್ರ   

ಸಂಗಾರೆಡ್ಡಿ (ತೆಲಂಗಾಣ): ಇಲ್ಲಿನ ಸಂಗಾರೆಡ್ಡಿ ಜಿಲ್ಲೆಯ ಔಷಧ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯ ರಿಯಾಕ್ಟರ್‌ನಲ್ಲಿ ಸೋಮವಾರ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಫೋಟದಿಂದ ಕುಸಿದ ಕಟ್ಟಡದ ಅವಶೇಷಗಳಡಿ ಮಂಗಳವಾರ ಇನ್ನಷ್ಟು ಮೃತದೇಹಗಳು ಪತ್ತೆಯಾಗಿವೆ.

‘ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಮತ್ತಷ್ಟು ಮೃತದೇಹಗಳು ದೊರೆತಿವೆ. ಒಟ್ಟು 33 ಶವಗಳನ್ನು ಹೊರತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಸಂಗಾರೆಡ್ಡಿ ಎಸ್‌ಪಿ ಪಾರಿತೋಷ್ ಪಂಕಜ್‌ ಮಂಗಳವಾರ ತಿಳಿಸಿದ್ದಾರೆ.

ADVERTISEMENT

ದುರಂತದ ಸಮಯದಲ್ಲಿ ಅಂದಾಜು 143 ಮಂದಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿ 57 ಮಂದಿ ಸುರಕ್ಷಿತರಾಗಿದ್ದಾರೆ. 34 ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದ್ದು, ಅವಶೇಷಗಳಡಿ ಶೋಧ ಕಾರ್ಯ ಮುಂದುವರಿದಿದೆ.

ಮುಖ್ಯಮಂತ್ರಿ ಭೇಟಿ: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಅವರು ಕೆಲ ಸಚಿವರ ಜತೆ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದರು. ಘಟನೆ ಬಗ್ಗೆ ಸಮಗ್ರ ವರದಿ ನೀಡುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ದೊಡ್ಡ ದುರಂತ ನಡೆದರೂ ಕಂಪನಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ್ದಕ್ಕೆ ಮುಖ್ಯಮಂತ್ರಿ ಅವರು ಕಂಪನಿಯ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

‘ಇದುವರೆಗೆ 9 ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ. ಡಿಎನ್‌ಎ ಪರೀಕ್ಷೆ ಬಳಿಕ ಇತರ ಮೃತದೇಹಗಳ ಗುರುತು ಪತ್ತೆ ಮಾಡಲಾಗುವುದು’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರಲ್ಲಿ ಹೆಚ್ಚಿನವರು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.

ಕಾರ್ಖಾನೆಯ ರಿಯಾಕ್ಟರ್‌ನಲ್ಲಿ ಸೋಮವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ ಬಳಿಕ ಬೆಂಕಿ ಹೊತ್ತಿಕೊಂಡಿತ್ತು. ಸ್ಫೋಟದ ತೀವ್ರತೆಗೆ ಮೂರು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿತ್ತು. 

₹1 ಕೋಟಿ ಪರಿಹಾರ: ಸಿ.ಎಂ ಭರವಸೆ

ಮೃತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ತಿಳಿಸಿದ್ದಾರೆ.

‘ತಲಾ ₹1 ಕೋಟಿ ಪರಿಹಾರ ಸಿಗುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಕಂಪನಿಯ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಲಿದೆ’ ಎಂದಿದ್ದಾರೆ.

ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹10 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದವರಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಅವರು ಪ್ರಕಟಿಸಿದರು. ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಮತ್ತು ಕಂಪನಿ ಭರಿಸಲಿವೆ ಎಂದರು.

ಎಫ್‌ಐಆರ್‌ ದಾಖಲು; ತನಿಖೆ ಶುರು

ಸಂತ್ರಸ್ತರೊಬ್ಬರ ಕುಟುಂಬದ ಸದಸ್ಯರು ನೀಡಿದ ದೂರಿನಂತೆ ಪೊಲೀಸರು ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ. ‘ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 105 110 ಮತ್ತು 117ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.