ಹೈದರಾಬಾದ್: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವವರ ಕನಿಷ್ಠ ವಯೋಮಿತಿಯನ್ನು ಈಗಿರುವ 25 ವರ್ಷದಿಂದ 21 ವರ್ಷಕ್ಕೆ ಇಳಿಸುವಂತೆ ದೇಶದ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಭಾನುವಾರ ತಿಳಿಸಿದರು.
ರಾಜೀವ್ ಗಾಂಧಿ ಸದ್ಭಾವನಾ ಯಾತ್ರೆಯಲ್ಲಿ ಮಾತನಾಡಿದ ಅವರು, ‘ದೇಶದ ರಾಜಕೀಯದಲ್ಲಿ ಯುವಕರು ಪ್ರಮುಖ ಪಾತ್ರವಹಿಸಬೇಕಿದೆ. ಹೀಗಾಗಿ ಕನಿಷ್ಠ ವಯಸ್ಸನ್ನು ಇಳಿಸಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
‘ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಮತದಾರರ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ್ದರು. ಇದು ದೇಶದ ಸಂಸದೀಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ನೆರವಾಗಿದೆ’ ಎಂದು ರೆಡ್ಡಿ ಶ್ಲಾಘಿಸಿದರು.
‘21ನೇ ವಯಸ್ಸಿನ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗ, 21ನೇ ವಯಸ್ಸಿನಲ್ಲಿ ಶಾಸಕರಾಗಲು ಏಕೆ ಅವಕಾಶವಿಲ್ಲ’ ಎಂದು ಅವರು ಪ್ರಶ್ನಿಸಿದರು.
ಮುಂದಿನ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸನ್ನು 25ರಿಂದ 21ಕ್ಕೆ ಇಳಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೋರಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗವುದು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.