
ಹೈದರಾಬಾದ್: ಗರಿಷ್ಠ ಎರಡು ಮಕ್ಕಳನ್ನು ಹೊಂದಿರುವವರು ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ‘ಎರಡು ಮಕ್ಕಳ ನೀತಿ’ ಯನ್ದು ರದ್ದುಪಡಿಸುವ ಮಸೂದೆಯನ್ನು ತೆಲಂಗಾಣ ವಿಧಾನಸಭೆ ಶನಿವಾರ ಅಂಗೀಕರಿಸಿದೆ.
ಪಂಚಾಯತ್ ರಾಜ್ ಸಚಿವೆ ದಾನಶ್ರೀ ಅನಸೂಯ ಸೀತಕ್ಕ ಅವರು ಸದನದಲ್ಲಿ ‘ತೆಲಂಗಾಣ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2026’ ಅನ್ನು ಮಂಡಿಸಿದರು.
‘1980 ಮತ್ತು 90 ರ ದಶಕದಲ್ಲಿ ಜನಸಂಖ್ಯೆ ಸ್ಫೋಟ, ಆಹಾರ ಭದ್ರತೆ, ನಿರುದ್ಯೋಗ ಮತ್ತು ಬಡತನದ ಸವಾಲುಗಳನ್ನು ನಿವಾರಿಸಲು ಜನಸಂಖ್ಯಾ ನಿಯಂತ್ರಣ ಕ್ರಮವಾಗಿ 1994 ರಲ್ಲಿ ‘ಎರಡು ಮಕ್ಕಳ ನೀತಿ’ಯನ್ನು ಪರಿಚಯಿಸಲಾಗಿತ್ತು. ಇದು ಜಾರಿಗೆ ಬಂದು 30 ವರ್ಷಗಳ ನಂತರ ಜನಸಂಖ್ಯೆ ನೀತಿಯನ್ನು ಸರ್ಕಾರ ಪರಿಶೀಲಿಸಿದೆ. ಆ ಪ್ರಕಾರ ತೆಲಂಗಾಣದ ಗ್ರಾಮೀಣ ಪ್ರದೇಶಗಳಲ್ಲಿ ಫಲವಂತಿಕೆ ದರ 1.7 ರಷ್ಟಿದ್ದು, ಇದೇ ರೀತಿ ಫಲವಂತಿಕೆ ಮುಂದುವರಿದರೆ, ತೆಲಂಗಾಣದ ಜನಸಂಖ್ಯೆಯ ಮೇಲೆ ಪ್ರತಿಕೂಲ ಪರಿಣಾಬೀರುತ್ತದೆ’ ಎಂದು ಸೀತಕ್ಕ ಹೇಳಿದರು.
ಕ್ಷೀಣಿಸುತ್ತಿರುವ ಫಲವತ್ತತೆ ದರವನ್ನು ಸುಧಾರಿಸಲು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಸರ್ಕಾರವು ‘2018 ರ ತೆಲಂಗಾಣ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾಪಿಸುತ್ತಿದೆ ಎಂದು ಅವರು ಹೇಳಿದರು. ಮಸೂದೆಯನ್ನು ನಂತರ ಸದನವು ಅಂಗೀಕರಿಸಿತು. ಈ ಉದ್ದೇಶಕ್ಕಾಗಿ ಹಿಂದೆ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.