ADVERTISEMENT

ತೆಲಂಗಾಣ | ಬನ್ಸವಾಡದಲ್ಲಿ ಕೋಮು ಘರ್ಷಣೆ: ಭಾರಿ ಪೊಲೀಸ್ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 16:22 IST
Last Updated 21 ಫೆಬ್ರುವರಿ 2026, 16:22 IST
   

ಹೈದರಾಬಾದ್: ಎರಡು ಕೋಮಿನ ಗುಂಪುಗಳ ನಡುವೆ ನಡೆದಿದ್ದ ಸಂಘರ್ಷದಿಂದ ಬಿಗುವಿನ ಸ್ಥಿತಿಗೆ ತಲುಪಿದ್ದ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬನ್ಸವಾಡ ಪಟ್ಟಣದಲ್ಲಿ ಬಲಪಂಥೀಯ ಸಂಘಟನೆಗಳು ಶನಿವಾರ ಬಂದ್‌ ನಡೆಸಿದವು. ಭಾರಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ಸ್ಥಳೀಯರ ಪ್ರಕಾರ ಅಂಗಡಿಯಲ್ಲಿ ಗ್ರಾಹಕ ಹಿಂದೂ ಭಕ್ತಿಗೀತೆ ಹಾಕಿದ್ದನ್ನು ಮುಸ್ಲಿಂ ವ್ಯಾಪಾರಿ ಆಕ್ಷೇಪಿಸಿದ್ದರಿಂದ ಉಂಟಾದ ವಾಗ್ವಾದ ಘರ್ಷಣೆಗೆ ಕಾರಣ ಎನ್ನಲಾಗಿದೆ.

‘ಅಂಗಡಿಯ ಮಹಿಳಾ ಮಾರಾಟ ಪ್ರತಿನಿಧಿ ಮತ್ತು ಗ್ರಾಹಕರೊಬ್ಬರ ನಡುವೆ ವಾಗ್ವಾದ ನಡೆದಿದ್ದೇ ಕೋಮು ಘರ್ಷಣೆಗೆ ಕಾರಣ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ’  ಎಂದು ಎಸ್‌ಪಿ ರಾಜೇಶ್ ಚಂದ್ರ ತಿಳಿಸಿದ್ದಾರೆ. 

ADVERTISEMENT

‘ಪೊಲೀಸರು ಪುರುಷ ಗ್ರಾಹಕರನ್ನು ಬಂಧಿಸಿದ್ದರು. ಅದಾದ ನಂತರ ಕೆಲವರು ಠಾಣೆ ಎದುರು ಪ್ರತಿಭಟಿಸಿದರು. ಇದು ಕೋಮು ಘರ್ಷಣೆಗೆ ತಿರುಗಿದ್ದು ಕೆಲವು ಸಮಾಜಘಾತುಕ ಶಕ್ತಿಗಳೂ ಘಟನೆಗೆ ಕೈಜೋಡಿಸಿದ್ದವು. ಘಟನೆಯಲ್ಲಿ ಕಾನ್‌ಸ್ಟೆಬಲ್‌ ಒಬ್ಬರಿಗೆ ಗಾಯವಾಗಿದೆ. 60 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಎಸ್‌ಪಿ ತಿಳಿಸಿದ್ದಾರೆ.

‌‘ತೆಲಂಗಾಣದಲ್ಲಿ ಕೋಮು ಸಂಘರ್ಷ ಹೆಚ್ಚುತ್ತಿವೆ. ಪೊಲೀಸ್ ವಶದಲ್ಲಿದ್ದ ಒಬ್ಬನ ಮೇಲೆ ಸಂಘ ಪರಿವಾರದವರು ಹಲ್ಲೆ ನಡೆಸಿದ್ದಾರೆ. ಬನ್ಸವಾಡದಲ್ಲಿ ಬಲ‍ಪಂಥೀಯ ಸಂಘಟನೆಗಳು ಅಲ್ಪಸಂಖ್ಯಾತರ ಅಂಗಡಿ ಮತ್ತು ಬೀದಿ ವ್ಯಾಪಾರಿಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ’ ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್‌ ಓವೈಸಿ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.