ADVERTISEMENT

ತಮಿಳುನಾಡಿನಲ್ಲಿ ಎಂಜಿಆರ್‌, ಜಯಲಲಿತಾ ದೇವಸ್ಥಾನ

ಮಧುರೈನಲ್ಲಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿಯಿಂದ ಉದ್ಘಾಟನೆ

ಪಿಟಿಐ
Published 30 ಜನವರಿ 2021, 18:53 IST
Last Updated 30 ಜನವರಿ 2021, 18:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಧುರೈ: ಎಐಎಡಿಎಂಕೆಯ ಹೆಗ್ಗುರುತಾಗಿದ್ದ ಎಂ.ಜಿ.ರಾಮಚಂದ್ರನ್‌(ಎಂಜಿಆರ್‌) ಹಾಗೂ ಜೆ.ಜಯಯಲಿತಾ ಅವರಿಗೆ ಮುಡಿಪಾಗಿಟ್ಟ ದೇವಸ್ಥಾನವೊಂದನ್ನು ಇಲ್ಲಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರು ಶನಿವಾರ ಉದ್ಘಾಟಿಸಿದರು.

ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ, ಆಳಡಿ ಎತ್ತರದ ಎಂಜಿಆರ್‌ ಹಾಗೂ ಜಯಲಲಿತಾ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ನಂತರದಲ್ಲಿ ಎರಡೂ ಪ್ರತಿಮೆಗೆ ಆರತಿ ಮಾಡಿದರು. ಮಂತ್ರಘೋಷದ ನಡುವೆ ಪುರೋಹಿತರು ದೇವಸ್ಥಾನದ ಗೋಪುರದ ಮೇಲೆ ಕುಂಬಾಭಿಷೇಕ ಮಾಡಿದರು.

ಮಧುರೈ ಜಿಲ್ಲೆಯ ಟಿ.ಕುನ್ನತ್ತೂರಿನಲ್ಲಿರುವ 12 ಎಕರೆ ಪ್ರದೇಶದಲ್ಲಿ ಈ ದೇವಸ್ಥಾನವಿದ್ದು, ಕಂದಾಯ ಸಚಿವ ಆರ್.ಬಿ.ಉದಯ್‌ ಕುಮಾರ್‌ ಇದರ ನಿರ್ಮಾಣದ ಮುಂದಾಳತ್ವ ವಹಿಸಿದ್ದರು. ದೇವಸ್ಥಾನವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಿದ ಹಿನ್ನೆಲೆಯಲ್ಲಿ ನೂರಾರು ಕಾರ್ಯಕರ್ತರು ಭೇಟಿ ನೀಡಿದ್ದರು. ಇವರನ್ನು ಉದ್ದೇಶಿಸಿ ಮಾತನಾಡಿದ ಪಳನಿಸ್ವಾಮಿ ಹಾಗೂ ಪನ್ನೀರ್‌ಸೆಲ್ವಂ, ಇಬ್ಬರು ನಾಯಕರೂ ತಮ್ಮ ಆಡಳಿತಾವಧಿಯಲ್ಲಿ ಕೈಗೊಂಡಿದ್ದ ಯೋಜನೆಗಳನ್ನು ಶ್ಲಾಘಿಸಿದರು.

ADVERTISEMENT

ಮುಂದಿನ ಕೆಲವೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಮತ್ತೆ ‘ಅಮ್ಮ’ನ ಸರ್ಕಾರವನ್ನು ತರಲು ಕಾರ್ಯಕರ್ತರಿಗೆ ಪಳನಿಸ್ವಾಮಿ ಕರೆ ನೀಡಿದರು.

‘ಕೈಯಲ್ಲಿ ಸುಬ್ರಹ್ಮಣ್ಯ ದೇವರ ಆಯುಧದಂತಹ ಈಟಿ ಹಿಡಿದು ತಮಿಳುನಾಡಿನ ಅಧಿಕಾರ ಪಡೆಯಬಹುದು ಎನ್ನುವ ತಂತ್ರ ಫಲಿಸುವುದಿಲ್ಲ. ಚುನಾವಣೆ ಬಂದ ಸಂದರ್ಭದಲ್ಲಿ ಕೆಲವರು ಜನರ ದಾರಿ ತಪ್ಪಿಸಲು ಕಪಟ ವೇಷ ಧರಿಸುತ್ತಾರೆ’ ಎಂದು ಇದೇ ಸಂದರ್ಭದಲ್ಲಿ ಪನ್ನೀರ್‌ಸೆಲ್ವಂ ಅವರು, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರಿಗೆ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.