ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿ ಸಂಕೀರ್ಣ ಮತ್ತು ಶ್ರೀಕೃಷ್ಣ ಜನ್ಮಭೂಮಿ ದೇಗುಲ
ಪಿಟಿಐ ಸಂಗ್ರಹ ಚಿತ್ರ
ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2024ರ ಜ. 22ರಂದು ಬಾಲರಾಮನ ದೇವಾಲಯದಲ್ಲಿ ನಡೆದ ಪ್ರಾಣಪ್ರತಿಷ್ಠಾಪನೆಯೊಂದಿಗೆ ರಾಜ್ಯದಲ್ಲಿ ದೇವಾಲಯ ಹಾಗೂ ಮಸೀದಿ ಸಂಘರ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಶಾಹಿ ಜಮಾ ಮಸೀದಿ ಜಾಗದಲ್ಲಿ ಪುರಾತನ ದೇವಾಲಯವಿತ್ತು ಎಂಬ ಹಿಂದೂ ಸಂಘಟನೆಗಳ ವಾದ ಪುರಸ್ಕರಿಸಿದ ನ್ಯಾಯಾಲಯ ಸಮೀಕ್ಷೆಗೆ ಆದೇಶಿಸಿದ್ದು, ಸಂಭಾಲ್ ದುರಂತಕ್ಕೆ ಕಾರಣವಾಯಿತು. ಅದರಲ್ಲಿ ನಾಲ್ಕು ಜನ ಜೀವವನ್ನೂ ಕಳೆದುಕೊಂಡರು.
ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ನಡೆದ ದೇವಾಲಯ – ಮಸೀದಿ ಸಂಘರ್ಷಗಳಲ್ಲಿ ಪ್ರಮುಖವಾದವು...
ಸಂಭಾಲ್: 2024ರ ನ. 19ರಿಂದ ಸಂಭಾಲ್ ಸಂಘರ್ಷದಿಂದಾಗಿ ಸುದ್ದಿಯಲ್ಲಿದೆ. ಮೊಘಲರ ಕಾಲದ ಮಸೀದಿ ಇರುವ ಜಾಗದಲ್ಲೇ ಹರಿಹರ ದೇಗುಲ ಇತ್ತು ಎಂಬುದರ ಕುರಿತು ಸಲ್ಲಿಕೆಯಾದ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಸಮೀಕ್ಷೆಗೆ ಆದೇಶಿಸಿತ್ತು.
ನ. 24ರಂದು ನಡೆದ 2ನೇ ಸಮೀಕ್ಷೆ ಸಂದರ್ಭದಲ್ಲಿ ಶಾಹಿ ಜಮಾ ಮಸೀದಿ ಬಳಿ ಹಿಂಸಾಚಾರ ಭುಗಿಲೆದ್ದಿತು. ಭದ್ರತಾ ಸಿಬ್ಬಂದಿಯೊಂದಿಗೆ ಪ್ರತಿಭಟನನಿರತರು ಸಂಘರ್ಷ ನಡೆಸಿದರು. ಹಿಂಸಾಚಾರದಲ್ಲಿ ನಾಲ್ಕು ಜನ ಮೃತಪಟ್ಟರು.
ಬುಡಾನ್: ಜಮಾ ಮಸೀದಿ ಶಮ್ಸಿ ಇರುವ ಜಾಗದಲ್ಲಿ ನೀಲಕಂಠ ಮಹಾದೇವ ದೇಗುಲ ಇತ್ತು. ಹೀಗಾಗಿ ಮಸೀದಿಯೊಳಗೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಸಂಚಾಲಕ ಮುಕೇಶ್ ಪಟೇಲ್ ಅವರು 2022ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಕ್ರಿಯಿಸುವಂತೆ ಮುಸ್ಲಿಂ ಪರ ವಕೀಲರಿಗೆ ನ್ಯಾಯಾಲಯ ಹೇಳಿದೆ.
ವಾರಾಣಸಿ: 1679ರ ಏ. 18ರಂದು ಆದಿ ವಿಶ್ವೇಶ್ವರ ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ದೇವಾಲಯವನ್ನು ಮೊಗಲ್ ದೊರೆ ಔರಂಗಜೇಬ್ ಧ್ವಂಸ ಮಾಡಿ ಮಸೀದಿ ನಿರ್ಮಿಸಿದ್ದರು ಎಂದು ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಅವರು ನ್ಯಾಯಾಲಯದಲ್ಲಿ ಧಾವೆ ಹೂಡಿದ್ದು, ಜ್ಞಾನವಾಪಿ ಪ್ರಕರಣ ಎಂದೇ ಪರಿಚಿತ.
ಔರಂಗಜೇಬ್ ಆಪ್ತ ಕಾರ್ಯದರ್ಶಿ ವಜೀರ್ ಸಖಿ ಮುಸ್ತಾದ್ ಖಾನ್ ಎಂಬುವವರ ದಿನಚರಿ ‘ಮಾಸಿರೆ ಆಲಂಗಿರಿ’ಯಲ್ಲಿ ಇದು ದಾಖಲಾಗಿದೆ. ಈ ದಾಖಲೆಯು ಕೋಲ್ಕತ್ತದ ಏಷ್ಯಾಟಿಕ್ ಸೊಸೈಟಿಯಲ್ಲಿದೆ ಎಂದು ಯಾದವ್ ಅವರು ತಮ್ಮ ಧಾವೆಯಲ್ಲಿ ಹೇಳಿದ್ದಾರೆ.
ಮಥುರಾ: ಶ್ರೀಕೃಷ್ಣ ಜನ್ಮಭೂಮಿ ಇರುವ ಜಾಗದಲ್ಲಿ ಔರಂಗಜೇಬ್ ಕಾಲದಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿತ್ತು. ಮಥುರಾದಲ್ಲಿ ಕೃಷ್ಣ ಹುಟ್ಟಿದ ಜಾಗದಲ್ಲಿ ದೇವಾಲಯ ಇತ್ತು. ಆದರೆ ಅದನ್ನು ನಂತರ ಕೆಡವಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಕೆಯಾದ ಅರ್ಜಿಯೂ ಈ ಸಂಘರ್ಷಕ್ಕೆ ಮತ್ತೊಂದು ಸೇರ್ಪಡೆ.
ಆದರೆ ಹಿಂದೂ ಸಂಘಟನೆಗಳ ಈ ವಾದವನ್ನು ತಿರಸ್ಕರಿಸಿರುವ ಶಾಹಿ ಈದ್ಗಾ ಹಾಗೂ ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿಯು ಹಲವು ಘಟನೆಗಳನ್ನು ಉಲ್ಲೇಖಿಸಿ ತನ್ನ ವಾದ ಮಂಡಿಸಿದೆ.
ಲಖನೌ: ತೀಲೆವಾಲಿ ಮಸೀದಿ ಇರುವ ಜಾಗದಲ್ಲಿ ಲಕ್ಷ್ಮಣ ತೀಲಾ ಎಂಬ ಪೂಜಾ ಸ್ಥಳವಿದ್ದು ಅದನ್ನು ತಮಗೆ ಮರಳಿ ನೀಡಬೇಕು ಎಂದು ಕೋರಿದ್ದ ಹಿಂದೂ ಸಂಘಟನೆಗಳ ಅರ್ಜಿಗೆ ಸಂಬಂಧಿಸಿದ ಆಕ್ಷೇಪವನ್ನು ಕೆಳ ಹಂತದ ನ್ಯಾಯಾಲಯ ತಿರಸ್ಕರಿಸಿ ಆದೇಶಿಸಿತ್ತು. ಇದರ ಸಂಬಂಧ ಸಲ್ಲಿಕೆಯಾದ ಮೇಲ್ಮನವಿಯನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಫೆ. 28ರಂದು ತಿರಸ್ಕರಿಸಿದ್ದರು.
ಮಸೀದಿ ಆವರಣದಲ್ಲಿ ಹಿಂದೊಮ್ಮೆ ಶೇಶನಾಗೇಶ ತೀಲೇಶ್ವರ ಮಹಾದೇವ ದೇವಾಲಯ ಇತ್ತು ಎಂದು ಹಿಂದೂ ಸಂಘಟನೆಗಳು ವಾದ ಮಾಡಿವೆ.
ಭಾಗ್ಪತ್: ಬರ್ನವಾ ಪ್ರದೇಶವು ಮಹಾಭಾರತ ಕಾಲದ ಲಕ್ಷಗ್ರಹ ಇದ್ದ ಸ್ಥಳ ಎಂದು ಹಿಂದೂ ಸಂಘಟನೆಗಳು ಹಕ್ಕು ಸಾಧಿಸುತ್ತಿರುವ ಸ್ಥಳದಲ್ಲಿ ಸೂಫಿ ಸಂತ ಶೇಖ್ ಬದ್ರುದ್ದೀನ್ ದರ್ಗಾ ಇತ್ತು ಎಂದು ಮುಸ್ಲಿಂ ಸಂಘಟನೆಗಳು ದಶಕದ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ವಕೀಲ ರಣವೀರ್ ಸಿಂಗ್ ತೋಮರ್ ಅವರ ಪ್ರಕಾರ, ವಿವಾದಿತ ಸ್ಥಳದಲ್ಲಿ ಯಾವುದೇ ಸಮಾದಿಯೂ ಇರಲಿಲ್ಲ ಹಾಗೂ ದರ್ಗಾವೂ ಇರಲಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.
ಜೌನ್ಪುರ: ಅಟಲಾ ಮಸೀದಿ ಸಮೀಕ್ಷೆಗೆ ಸಂಬಂಧಿಸಿದಂತೆ ಸ್ವರಾಜ್ ವಾಹಿನಿ ಸಂಘಟನೆಯ ಅಧ್ಯಕ್ಷ ಸಂತೋಷ್ ಕುಮಾರ್ ಮಿಶ್ರಾ ಅವರು ಧಾವೆ ಹೂಡಿದ್ದು, ವಿವಾದಿತ ಸ್ಥಳದಲ್ಲಿ ಅಟಲಾ ದೇವಿ ಮಂದಿರ ಇದ್ದು ಇಲ್ಲಿ ಸನಾತನ ಧರ್ಮದವರಿಗೆ ಪೂಜೆಗೆ ಅವಕಾಶ ನೀಡಬೇಕು ಎಂದು ಕೋರಿದ್ದರು.
ಈ ಪ್ರಕರಣ ಕುರಿತ ತೀರ್ಪು ಪ್ರಕಟಿಸುವ ಹಂತವನ್ನು ನ್ಯಾಯಾಲಯ ತಲುಪಿತ್ತು. ಆದರೆ ಧಾರ್ಮಿಕ ಸ್ಥಳ ಕುರಿತ ವಿವಾದ ಕುರಿತ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡಬಾರದು ಎಂಬ ಸುಪ್ರೀಂ ಕೋರ್ಟ್‌ನ ಡಿ. 16ರ ಆದೇಶದಂತೆ, ತೀರ್ಪು ಪ್ರಕಟವಾಗಿಲ್ಲ.
ದೇವಾಲಯ ಹಾಗೂ ಮಸೀದಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಮೀಕ್ಷೆಯನ್ನೂ ಒಳಗೊಂಡಂತೆ ಯಾವುದೇ ಆದೇಶವನ್ನು ತನ್ನ ಮುಂದಿನ ನಿರ್ದೇಶನದವರೆಗೂ ಪ್ರಕಟಿಸದಂತೆ ನಿರ್ದೇಶಿಸಿತ್ತು. ಈ ನಿರ್ದೇಶನ ನೀಡಿದ್ದ ಪೀಠದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾ. ಸಂಜಯ್ ಕುಮಾರ್ ಹಾಗೂ ನ್ಯಾ. ಕೆ.ವಿ. ವಿಶ್ವನಾಥನ್ ಇದ್ದರು.
‘ಅಯೋಧ್ಯೆಯ ರಾಮಮಂದಿರ ದೇವಾಲಯದ ನಿರ್ಮಾಣದ ನಂತರ ಕೆಲ ವ್ಯಕ್ತಿಗಳು ದೇವಾಲಯ – ಮಸೀದಿ ಸಂಘರ್ಷದಲ್ಲಿ ತೊಡಗಿದ್ದು, ಆ ಮೂಲಕ ತಾವು ಹಿಂದೂ ಮುಖಂಡರಾಗಬಹುದು ಎಂದು ನಂಬಿದ್ದಾರೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಹೇಳಿದ್ದರು.
ಪುಣೆಯಲ್ಲಿ ನಡೆದಿದ್ದ ‘ಭಾರತ ವಿಶ್ವಗುರು’ ಎಂಬ ವಿಷಯ ಕುರಿತ ಉಪನ್ಯಾಸದಲ್ಲಿ ಮಾತನಾಡಿದ್ದ ಅವರು, ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಾಣ ಅಗತ್ಯ. ಪ್ರತಿನಿತ್ಯ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಇವುಗಳಿಗೆ ಹೇಗೆ ಅವಕಾಶ ನೀಡಲು ಸಾಧ್ಯ? ಇವು ಭವಿಷ್ಯದಲ್ಲಿ ಮುಂದುವರಿಯಬಾರದು. ನಾವೆಲ್ಲರೂ ಒಟ್ಟಿಗೆ ಬದುಕುವ ಸಮಾಜವನ್ನು ಭಾರತ ಜಗತ್ತಿಗೆ ತೋರಿಸಬೇಕಿದೆ’ ಎಂದಿದ್ದರು.
ಸಂಭಾಲ್ ಘಟನೆ ಕುರಿತು ಪ್ರತಿಕ್ರಿಯಿಸಿದ್ದ ನಿವೃತ್ತ ನ್ಯಾಯಮೂರ್ತಿ ಡಿ.ಪಿ. ಸಿಂಗ್, ‘ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಮೊದಲಿಗೆ ರಾಜ್ಯ ಮತ್ತು ಮಸೀದಿಗೆ ನೋಟಿಸ್ ನೀಡಬೇಕಿತ್ತು. ವಕೀಲರು ಅಥವಾ ನ್ಯಾಯಾಲಯದ ಅಮೀನರನ್ನು ನೇಮಿಸಿ ಸಮೀಕ್ಷೆ ಕಾರ್ಯ ನಡೆಸಬೇಕಿತ್ತು. ಇಂಥ ಪ್ರಕರಣದಲ್ಲಿ ಅವಸರ ಅನಗತ್ಯ’ ಎಂದು ಹೇಳಿದ್ದಾರೆ ಎಂದು ಪಿಟಿಐ ತಿಳಿಸಿದೆ
ಇದೇ ಪ್ರಕರಣ ಕುರಿತು ಮಾತನಾಡಿದ ವಕೀಲ ಅಂಕುರ್ ಸಕ್ಸೇನಾ, ‘ಶತಮಾನಗಳಿಂದ ಜಾತ್ಯತೀತ ಎಂಬ ಹೊರೆಯನ್ನು ಹೊತ್ತುಕೊಂಡೇ ಸಾಗಿ ಬಂದಿದ್ಧೇವೆ. ಇದು ಎಲ್ಲೋ ಒಂದು ಹಂತದಲ್ಲಿ ಸ್ಫೋಟವಾಗಬೇಕಿತ್ತು. ಅದು ಈಗ ಆಗಿದೆ. ಸತ್ಯಮೇವ ಜಯತೇ. ಹಿಂದಿನ ಸರ್ಕಾರಗಳು ತುಷ್ಟೀಕರಣ ನೀತಿ ಅಳವಡಿಸಿಕೊಂಡಿದ್ದೇ ಈ ಎಲ್ಲಾ ಸಮಸ್ಯೆಗಳಿಗೂ ಕಾರಣ’ ಎಂದಿದ್ದಾರೆ.
ಅಯೋಧ್ಯೆಯ ರಾಮಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಪ್ರತಿಕ್ರಿಯಿಸಿ, ‘ರಾಮಮಂದಿರ ಪ್ರಕರಣದಲ್ಲಿ ನ್ಯಾಯಾಲಯ ಯಾವ ರೀತಿಯಲ್ಲಿ ಆದೇಶ ನೀಡಿದೆಯೋ, ಅದೇ ಮಾದರಿಯಲ್ಲಿ ದೇಶದಲ್ಲಿ ದೇವಾಲಯಗಳಿರುವ ಸಾಕ್ಷಿಗಳಿರುವ ಇಂಥ ಇತರ ವಿವಾದಗಳನ್ನೂ ಬಗೆಹರಿಸಬೇಕು’ ಎಂದಿದ್ದಾರೆ.
ಆಲ್ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಹಿರಿಯ ಸದಸ್ಯ ಖಾಲೀದ್ ರಶಿದ್ ಫರಂಗಿ ಮಾಹ್ಲಿ ಅವರು ಪ್ರತಿಕ್ರಿಯಿಸಿ, ‘ಪೂಜಾ ಸ್ಥಳ 1991ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಮೊದಲ ದಿನದಿಂದಲೂ ಹೇಳುತ್ತಲೇ ಬಂದಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.