ADVERTISEMENT

TTD: ದೇವಾಲಯದ ಪಾವಿತ್ರ್ಯತೆ, ಭಕ್ತರ ಭಾವನೆಗೆ ಆದ್ಯತೆ ಅಗತ್ಯ: CM ನಾಯ್ಡು ಸೂಚನೆ

ಪಿಟಿಐ
Published 2 ಏಪ್ರಿಲ್ 2025, 14:15 IST
Last Updated 2 ಏಪ್ರಿಲ್ 2025, 14:15 IST
<div class="paragraphs"><p>ತಿರುಮದಲ್ಲಿರುವ ವೆಂಕಟೇಶ್ವರ ದೇವಸ್ಥಾನ</p></div>

ತಿರುಮದಲ್ಲಿರುವ ವೆಂಕಟೇಶ್ವರ ದೇವಸ್ಥಾನ

   

ಅಮರಾವತಿ: ‘ತಿರುಮಲ ತಿರುಪತಿ ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಮತ್ತು ಭೇಟಿ ನೀಡುವ ಭಕ್ತರ ಭಾವನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಅತ್ಯಗತ್ಯ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಬುಧವಾರ ಹೇಳಿದ್ದಾರೆ.

ತಿರುಮಲ ತಿರುಪತಿ ದೇವಳಗಳ (TTD) ಸಮಗ್ರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ‘ದೇವಾಲಯದಲ್ಲಿ ನೀಡಲಾಗುವ ಎಲ್ಲಾ ಸೇವೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಲ್ಲೂ ದೇವಸ್ಥಾನದ ಪಾವಿತ್ರ್ಯತೆ ಮತ್ತು ಭಕ್ತರ ಭಾವನೆಯನ್ನು ಗಮದಲ್ಲಿಟ್ಟುಕೊಳ್ಳಬೇಕು’ ಎಂದಿದ್ದಾರೆ.

ADVERTISEMENT

‘ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣವನ್ನು ಜವಾಬ್ದಾರಿಯುತವಾಗಿ ಅಗತ್ಯ ಯೋಜನೆಗಳಿಗೆ ಮಾತ್ರ ಖರ್ಚು ಮಾಡಬೇಕು. ಅಭಿವೃದ್ಧಿಯ ನೆಪದಲ್ಲಿ ಅನಗತ್ಯ ವೆಚ್ಚಗಳ ಬಗ್ಗೆ ಎಚ್ಚರದಿಂದರಬೇಕು. ನಾವು ಕೇವಲ ದೇವಸ್ಥಾನದ ಟ್ರಸ್ಟಿಗಳಾಗಿದ್ದು, ವೆಂಕಟೇಶ್ವರನಿಗೆ ಸೇರಿದ ಒಂದು ರೂಪಾಯಿಯನ್ನೂ ದುರುಪಯೋಗ ಮಾಡುವ ಹಕ್ಕು ನಮಗಿಲ್ಲ. ಪಾರದರ್ಶಕತೆ ಕಾಪಾಡಲು ಆಂತರಿಕ ಮತ್ತು ಮಹಾಲೇಖಪಾಲರ ಲೆಕ್ಕಪರಿಶೋಧನೆ ನಡೆಸುವುದು ಉತ್ತಮ’ ಎಂದಿದ್ದಾರೆ.

ಅಲಿಪಿರಿಯಲ್ಲಿ 25 ಸಾವಿರ ಭಕ್ತರಿಗೆ ವಸತಿ ಸೌಕರ್ಯ ಕಲ್ಪಿಸುವ ಕಟ್ಟಡ ನಿರ್ಮಾಣ, 60 ಹೊಸ ದೇವಾಲಯಗಳ ನಿರ್ಮಾಣ ಯೋಜನೆ ಮತ್ತು ಅಮರಾವತಿಯಲ್ಲಿ ಪದ್ಮಾವತಿ ಹಾಗೂ ವೆಂಕಟೇಶ್ವರ ದೇವಾಲಯಗಳ ನಿರ್ಮಾಣ ಯೋಜನೆಗಳ ಪ್ರಗತಿ ಪರಿಶೀಲನೆಯ ಮಾಹಿತಿಯನ್ನು ಮುಖ್ಯಮಂತ್ರಿ ನಾಯ್ಡು ಪಡೆದರು.

ತಿರುಮಲದಲ್ಲಿ ಹಸಿರು ಪ್ರದೇಶವನ್ನು ಸದ್ಯ ಇರುವ ಶೇ 68ರಿಂದ ಶೇ 80ಕ್ಕೆ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೇವಾಲಯಕ್ಕೆ ಬರುವ ಅಪಾರ ಭಕ್ತರ ಸಂಖ್ಯೆಯನ್ನು ಕಳೆದ ಒಂಬತ್ತು ತಿಂಗಳುಗಳಿಂದ ನಿರ್ವಹಿಸುತ್ತಿರುವ ಬಗೆ ಮತ್ತು ಹೆಚ್ಚುತ್ತಿರುವ ಸಂಖ್ಯೆ ಕುರಿತು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ವಿಶೇಷ ಸಂದರ್ಭಗಳಾದ ಭ್ರಹ್ಮೋತ್ಸವ, ರಥಸಪ್ತಮಿ ಹಾಗೂ ವೈಕುಂಠ ಏಕಾದಶಿಯ ಆಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ದೇವಸ್ಥಾನದಲ್ಲಿ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಭದ್ರತಾ ಅಧಿಕಾರಿ ಹಾಗೂ ಅಧ್ಯಕ್ಷರ ಹುದ್ದೆಯನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದು ಎಂದು ನಾಯ್ಡು ಭರವಸೆ ನೀಡಿದರು. ತಿರುಮಲ ತಿರುಪತಿ ದೇವಸ್ಥಾನಗಳಲ್ಲಿ ಆಡಳಿತಾತ್ಮಕ ಶುದ್ಧತೆ ಶೇ 100ರಷ್ಟು ಅಗತ್ಯ. ಕೆಲ ಅನಗತ್ಯ ಹುದ್ದೆಗಳನ್ನು ಶೀಘ್ರದಲ್ಲಿ ರದ್ದುಪಡಿಸುವ ಭರವಸೆ ನೀಡಿದರು.

ವಾಟ್ಸ್‌ಆ್ಯಪ್‌ ಆಧಾರಿತ ದೇವಾಲಯದ ಸೌಲಭ್ಯಗಳನ್ನು ಶೀಘ್ರದಲ್ಲಿ ಆರಂಭಿಸುವುದಾಗಿ ಮುಖ್ಯಮಂತ್ರಿ ಹೇಳಿದರು. ಜತೆಗೆ ಅಕ್ರಮಗಳ ತಡೆಗೆ ಆಧಾರ್ ಗುರುತಿನ ಚೀಟಿ ಆಧಾರಿತ ಸೌಲಭ್ಯಗಳನ್ನೂ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಟಿಟಿಡಿಗೆ ಸೇರಿದ ಕರೀಂನಗರ, ಕೊಡಾಂಗಲ್‌, ನವಿ ಮುಂಬೈ, ಬಾಂದ್ರಾ, ಉಳಂದೂರ್‌ಪೇಟ್ ಹಾಗೂ ಕೊಯಮತ್ತೂರ್‌ನಲ್ಲಿನ ದೇವಾಲಯಗಳ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನೂ ಮುಖ್ಯಮಂತ್ರಿ ನಾಯ್ಡು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.