ಕೊಲೆ ಆರೋಪಿ ದೀಪಕ್ ಯಾದವ್, ರಾಧಿಕಾ ಯಾದವ್
ಬೆಂಗಳೂರು: ದೆಹಲಿ ಬಳಿಯ ಗುರುಗ್ರಾಮದ ಸೆಕ್ಟರ್ 57ರ ಸುಶಾಂತ್ ಲೋಕ್ ಪ್ರದೇಶದಲ್ಲಿ ನಿನ್ನೆ ಹೆತ್ತ ತಂದೆಯಿಂದಲೇ ಹತ್ಯೆಯಾದ ರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಬಗ್ಗೆ ಗುರುಗ್ರಾಮ ಅಷ್ಟೇ ಅಲ್ಲದೇ ದೇಶದ ಅನೇಕ ಕಡೆಯಿಂದ ಮರುಕ ವ್ಯಕ್ತವಾಗುತ್ತಿದೆ.
ರಾಧಿಕಾ ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ತಂದೆ ದೀಪಕ್ ಯಾದವ್ (49) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಷ್ಟಕ್ಕೂ ತಂದೆಯೇ ಮಗಳನ್ನು ಹತ್ಯೆ ಮಾಡಲು ಕಾರಣವಾದರೂ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಅದಾಗ್ಯೂ ಪೊಲೀಸ್ ಪ್ರಾಥಮಿಕ ತನಿಖೆಗಳ ಪ್ರಕಾರ ಕೊಲೆಗೆ ಕಾರಣಗಳು ಹಲವು ಎನ್ನಲಾಗಿದೆ.
ಜುಲೈ 10 ರಂದು ಸಂಜೆ 5 ಗಂಟೆ ಸುಮಾರು ಒಂದನೇ ಮಹಡಿಯ ಕೋಣೆಯಲ್ಲಿ 25 ವರ್ಷದ ರಾಧಿಕಾ ಅದೇನೋ ತಡಕಾಡುತ್ತಿದ್ದಾಗ ಸಪ್ಪಳವಿಲ್ಲದೇ ಹಿಂದಿನಿಂದ ಬಂದಿದ್ದ ದೀಪಕ್ ಯಾದವ್, ಆಕೆಯ ಬೆನ್ನಿಗೆ ‘.32bore’ ರಿವಾಲ್ವರ್‌ನಿಂದ 5 ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದ ರಾಧಿಕಾ ನೆಲಮಹಡಿಯ ಅಡುಗೆ ಕೋಣೆಯಲ್ಲಿದ್ದ ತನ್ನ ತಾಯಿ ಮಂಜು ಯಾದವ್ ಬಂದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಪ್ರಾಣ ಬಿಟ್ಟಿದ್ದಾಳೆ.
ಮಂಜು ಯಾದವ್ ಅವರ ಹಿಂದೆಯೇ ಓಡಿ ಬಂದ ದೀಪಕ್ ಯಾದವ್ ತಮ್ಮ ಕುಲದೀಪ್ ಯಾದವ್, ಅಣ್ಣನ ಕೃತ್ಯವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕಡೆಗೆ ಪೊಲೀಸರಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾರೆ.
ಮಗಳನ್ನು ಕೊಂದಿರುವುದೇಕೆ? ಎಂಬ ಬಗ್ಗೆ ಆರೋಪಿ ದೀಪಕ್ ಸರಿಯಾಗಿ ಬಾಯಿ ಬಿಡುತ್ತಿಲ್ಲ. ಏನೂ ಮಾತನಾಡುತ್ತಿಲ್ಲ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.
‘ಕಳೆದ ವರ್ಷ ಯುವಕನೊಂದಿಗೆ ರಾಧಿಕಾ ಮ್ಯೂಸಿಕ್ ವಿಡಿಯೊ ಒಂದರಲ್ಲಿ ಕಾಣಿಸಿಕೊಂಡಿದ್ದಕ್ಕೆ ಹಾಗೂ ಟೆನಿಸ್‌ಗೆ ಬಿಡುವು ನೀಡಿ ನಟನೆಗೆ ಹೋಗುತ್ತಾಳೆ ಎಂಬುದಕ್ಕೆ ದೀಪಕ್ ಸಿಟ್ಟಾಗಿದ್ದರು ಎನ್ನಲಾಗಿದೆ. ಅಲ್ಲದೇ, ರಾಧಿಕಾ ಟೆನಿಸ್ ಆಟದಿಂದ ಗುರುತಿಸಿಕೊಂಡಿದ್ದರಿಂದ ಗುರುಗ್ರಾಮದಲ್ಲಿ ಸ್ಥಳೀಯ ಟೆನಿಸ್ ಅಕಾಡೆಮಿ ತೆರೆದಿದ್ದರು. ಇದರಿಂದ ಅವರು ಸಾಕಷ್ಟು ಆದಾಯವನ್ನೂ ಸಂಪಾದಿಸುತ್ತಿದ್ದರು. ಮನೆಗೂ ಹಣಕಾಸಿನ ಸಹಾಯ ನೀಡುತ್ತಿದ್ದರು. ‘ಮಗಳ ಸಂಪಾದನೆಯಿಂದ ತಂದೆ ಬದುಕುತ್ತಿದ್ದಾನೆ’ ಎಂದು ದೀಪಕ್ ಬಗ್ಗೆ ನೆರೆಹೊರೆಯವರು ಕುಹಕವಾಡುತ್ತಿದ್ದರು. ಹಾಗಾಗಿ ಮಗಳ ಬಗ್ಗೆ ದೀಪಕ್ ಯಾದವ್ ಕಳೆದ ಕೆಲ ತಿಂಗುಳುಗಳಿಂದ ಮುನಿಸಿಕೊಂಡಿದ್ದರು. ಹತ್ಯೆ ಮಾಡಲು ಈ ಅಂಶಗಳೇ ಕಾರಣವಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಂಪೂರ್ಣ ವಿಚಾರಣೆ ನಡೆದ ಮೇಲೆ ನಿಖರ ಕಾರಣಗಳು ಗೊತ್ತಾಗಲಿದೆ’ ಎಂದು ಗುರುಗ್ರಾಮ ಪೊಲೀಸ್ ಕಮಿಷನರೇಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಸಂದೀಪ್ ಸಿಂಗ್ ತಿಳಿಸಿದ್ದಾರೆ.
ಮೊದಲು ಇದೊಂದು ಮರ್ಯಾದೆಗೇಡು ಹತ್ಯೆಯಂದೂ ಚರ್ಚೆಯಾಗಿತ್ತು. ಆದರೆ, ಪೊಲೀಸರು ಆ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಮಗಳಿಗೆ ಸಿಕ್ಕ ಯಶಸ್ಸಿಗೆ ಆ ನಂತರ ತನಗಾದ ಪರಿಸ್ಥಿತಿಗೆ ದೀಪಕ್ ಯಾದವ್ ಮಾನಸಿಕವಾಗಿ ವಿಚಿಲಿತರಾಗಿದ್ದರು ಎಂಬುದಾಗಿ ಚರ್ಚೆಯಾಗುತ್ತಿದೆ.
ರಾಷ್ಟ್ರೀಯ ಟೆನಿಸ್ ಆಟಗಾರ್ತಿಯಾಗಿ ರಾಧಿಕಾ ಗುರುತಿಸಿಕೊಂಡಿದ್ದರು. ಅನೇಕ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಗಳಲ್ಲೂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.