ADVERTISEMENT

ಶ್ರೀಲಂಕಾದಲ್ಲಿ ತೀವ್ರ ಹಿಂಸಾಚಾರ: ತಮಿಳುನಾಡಲ್ಲಿ ಕಟ್ಟೆಚ್ಚರ

ರಾಮನಾಥಪುರಂ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭದ್ರತೆ ಮತ್ತು ಪಹರೆ ತೀವ್ರ

​ಪ್ರಜಾವಾಣಿ ವಾರ್ತೆ
Published 11 ಮೇ 2022, 15:29 IST
Last Updated 11 ಮೇ 2022, 15:29 IST
ಸಾಂದರ್ಭಿಕ ಚಿತ್ರ –ಪಿಟಿಐ
ಸಾಂದರ್ಭಿಕ ಚಿತ್ರ –ಪಿಟಿಐ   

ಚೆನ್ನೈ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ರಾಜಪಕ್ಸ ಕುಟುಂಬದ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಿಂದಾಗಿಪರಿಸ್ಥಿತಿ ಕೈಮೀರುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ರಾಮನಾಥಪುರಂ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದು, ತೀವ್ರ ಕಟ್ಟೆಚ್ಚರ ವಹಿಸಿದೆ.

ದೇಶದ ಆರ್ಥಿಕ ಬಿಕ್ಕಟ್ಟಿನಿಂದ ಬಾಧಿತರಾದವರು ಮಾತ್ರವಲ್ಲದೆ, ಕ್ಷೋಭೆಗೆ ಉತ್ತೇಜನ ನೀಡುವವರೂ ಸಮುದ್ರಮಾರ್ಗದ ಮೂಲಕ ಅಕ್ರಮವಾಗಿ ನುಸುಳಬಹುದು ಎಂದು ರಾಜ್ಯ ಸರ್ಕಾರ ಈ ಬಿಗಿ ಕ್ರಮಕೈಗೊಂಡಿದೆ. ಶ್ರೀಲಂಕಾದ ತಲೈಮನ್ನಾರ್‌ನಿಂದ ರಾಮೇಶ್ವರಂಗೆ ದೋಣಿಯಲ್ಲಿ ಕೇವಲ 40 ನಿಮಿಷ ಪ್ರಯಾಣ. ಈ ಮಾರ್ಗದ ಮೂಲಕವೇ ಕಳೆದ ಎರಡು ತಿಂಗಳಿಂದ ಶ್ರೀಲಂಕಾ ಪ್ರಜೆಗಳು ತಮಿಳುನಾಡಿಗೆ ಪ್ರವೇಶಿಸುತ್ತಿದ್ದಾರೆ. ಹೀಗಾಗಿ ಭಾರತೀಯ ನೌಕಾ ಪಡೆ ಮತ್ತು ಕರಾವಳಿ ಪಡೆಯ ಜೊತೆ ನಿರಂತರ ಸಂಪರ್ಕದಲ್ಲಿರಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಪ್ರಜಾವಾಣಿಗೆ ತಿಳಿಸಿದ್ದಾರೆ.

ADVERTISEMENT

‘ಶ್ರೀಲಂಕಾದಲ್ಲಿ ಪರಿಸ್ಥಿತಿ ಬಿಗಡಾಯಿಸಿದಾಗಲೆಲ್ಲಾ ತಮಿಳುನಾಡಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗುತ್ತದೆ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ತಕ್ಷಣಕ್ಕೆ ಮುಗಿಯುವ ಸೂಚನೆ ಕಾಣುತ್ತಿಲ್ಲ. ಹೀಗಾಗಿ ಅನೇಕ ತಮಿಳರು ಭಾರತದ ಆಶ್ರಯ ಬಯಸಿ ಬರುವ ಸಾಧ್ಯತೆ ಇದೆ. ಅಲ್ಲದೆ ಕಳೆದ ವಾರದಿಂದ 50 ಕೈದಿಗಳು ಕೊಲಂಬೊದ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದಾರೆ. ಹೀಗಾಗಿ ಕರಾವಳಿ ಗಡಿಗಳಲ್ಲಿ ತೀವ್ರ ಕಣ್ಗಾವಲು ವಹಿಸಲಾಗಿದೆ‘ ಎಂದು ಅವರು ತಿಳಿಸಿದ್ದಾರೆ.

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಮಿತಿಮೀರುತ್ತಿದ್ದಂತೆಯೇ ಕಳೆದ ಮಾರ್ಚ್‌ನಿಂದ ಶ್ರೀಲಂಕಾದ 80 ಮಂದಿ ರಾಮೇಶ್ವರಂಗೆ ಬಂದಿದ್ದಾರೆ. ಇವರೆಲ್ಲರನ್ನೂ ಶಾಶ್ವತ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.