ADVERTISEMENT

ಮೀಸಲಾತಿ ವಿರೋಧಿಸಿ NC ಸಂಸದ ಪ್ರತಿಭಟನೆ: ಆಡಳಿತ ಪಕ್ಷದೊಳಗೆ ಭುಗಿಲೆದ್ದ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 14:22 IST
Last Updated 24 ಡಿಸೆಂಬರ್ 2024, 14:22 IST
<div class="paragraphs"><p>ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸಂಸದ ಆಗಾ ರುಹುಲ್ಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು</p></div>

ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸಂಸದ ಆಗಾ ರುಹುಲ್ಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು

   

–ಪಿಟಿಐ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವುದರ ವಿರುದ್ಧ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸಂಸದ ಆಗಾ ರುಹುಲ್ಲಾ ನೇತೃತ್ವದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಮರು ದಿನವೇ ಪಕ್ಷದೊಳಗೆ ಸಂಸದರ ವಿರುದ್ಧ ಅಸಮಾಧಾನ ತೀವ್ರಗೊಂಡಿದೆ.

ADVERTISEMENT

ಈ ವಿಷಯದ ಬಗ್ಗೆ ಪಕ್ಷದ ತೀರ್ಮಾನ ಟೀಕಿಸುವ ರುಹುಲ್ಲಾ ಅವರ ನಿಲುವನ್ನು ಪ್ರಶ್ನಿಸಿರುವ ಎನ್‌ಸಿಯ ಹಿರಿಯ ನಾಯಕ ಮತ್ತು ಶಾಸಕ ಸಲ್ಮಾನ್ ಸಾಗರ್ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.

‘ನೀವು ಯಾರೊಂದಿಗೆ ಕೈಜೋಡಿಸಿದ್ದೀರಿ? ನಮ್ಮ ಒಳ್ಳೆಯ ಕೆಲಸಗಳನ್ನು ಹಾಳುಮಾಡಲು ಅವಕಾಶಕ್ಕಾಗಿ ಎದುರು ನೋಡುವ ನಿಮ್ಮ ಶತ್ರುಗಳೊಂದಿಗೆ ನೀವು ಕುಳಿತ್ತಿದ್ದೀರಲ್ಲಾ?’ ಎಂದು ಸಾಗರ್‌ ಕಿಡಿಕಾರಿದ್ದಾರೆ.

ಯಾವುದೇ ವ್ಯಕ್ತಿ ತಮ್ಮ ಅಭಿಪ್ರಾಯ, ನಿಲುವು ವ್ಯಕ್ತಪಡಿಸಲು ಸ್ವತಂತ್ರವಾಗಿದ್ದರೂ ‘ರುಹುಲ್ಲಾ ಸಾಹಿಬ್ ಅವರಂತಹ ಹಿರಿಯ ವ್ಯಕ್ತಿಗಳು ಸೇರಿ ಯಾರೂ ಪಕ್ಷಕ್ಕಿಂತ ಮಿಗಿಲಲ್ಲ’ ಎಂದು ಸಾಗರ್‌ ಒತ್ತಿ ಹೇಳಿದರು.
‘ನಿನ್ನೆ ನಡೆದ ಘಟನೆಯು ರುಹುಲ್ಲಾ ಸಾಹಿಬ್‌ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವ ಬದಲು ಹಾನಿ ಮಾಡಿರಬಹುದು. ಪ್ರತಿಭಟನೆಗೆ ನೀಡಲಾದ ರಾಜಕೀಯ ಬಣ್ಣವು ಅವರ ಸ್ಥಾನವನ್ನು ವಿಚಿತ್ರವೆನ್ನುವಂತೆ ಮಾಡಿದೆ. ಬಹುಶಃ ಅವರಿಗೆ ಇದು ಲಾಭ ತಂದುಕೊಡುವ ಬದಲು ನಷ್ಟ ಮಾಡಿದೆ’ ಎಂದು ಅವರು ಹೇಳಿದರು.
ಸಾಗರ್ ಅವರ ತಂದೆ ಅಲಿ ಮೊಹಮ್ಮದ್ ಸಾಗರ್ ಅವರು ಎನ್‌ಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಮೀಸಲಾತಿ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ಇನ್ನಿತರ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎಂಬ ಬಗ್ಗೆ ಬೆಳೆಯುತ್ತಿರುವ ಭಿನ್ನಮತವು ಪಕ್ಷದೊಳಗಿನ ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸುವ ಸೂಚನೆಯಾಗಿ ಕಾಣಿಸುತ್ತಿದೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಐಷಾರಾಮಿ ಗುಪ್ಕರ್ ನಿವಾಸದ ಹೊರಗೆ ರುಹುಲ್ಲಾ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ  ಪ್ರತಿಭಟನೆಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕರಾದ ಇಲ್ತಿಜಾ ಮುಫ್ತಿ ಮತ್ತು ವಹೀದ್ ಉರ್ ರೆಹಮಾನ್ ಪಾರಾ ಮತ್ತು ಶ್ರೀನಗರದ ಮಾಜಿ ಮೇಯರ್ ಜುನೈದ್ ಮಟ್ಟು ಕೂಡ ಭಾಗವಹಿಸಿದ್ದರು.

ಮೀಸಲು ಸೀಟುಗಳನ್ನು ಈಗಿರುವ ಶೇ 60ರಿಂದ ಶೇ 25ಕ್ಕೆ ಇಳಿಸಲು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಮೀಸಲಾತಿ ವರ್ಗದ ವಿದ್ಯಾರ್ಥಿಗೆ ಮೆರಿಟ್‌ನಲ್ಲಿ ಸಾಮಾನ್ಯ ವರ್ಗದ ಸೀಟನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವ ಸರ್ಕಾರಿ ಆದೇಶವನ್ನು ರದ್ದುಗೊಳಿಸುವಂತೆಯೂ ಅವರು ಒತ್ತಾಯಿಸುತ್ತಿದ್ದಾರೆ. 

ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಹಾಗೂ ಎನ್‌ಸಿಯ ಮಿತ್ರಪಕ್ಷವಾಗಿರುವ ಕಾಂಗ್ರೆಸ್‌ ಶಾಸಕ ಗುಲಾಮ್‌ ಅಹಮದ್‌ ಮಿರ್ ಅವರು ರುಹುಲ್ಲಾ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರುಹುಲ್ಲಾ ಅವರು ತಮ್ಮ ವಾದ ಮಂಡಿಸಲು ಸಾರ್ವಜನಿಕ ವೇದಿಕೆ ಬಳಸುವುದಕ್ಕಿಂತ, ಸಮಸ್ಯೆಗಳನ್ನು ಬಗೆಹರಿಸಲು ನೇರವಾಗಿ ಮುಖ್ಯಮಂತ್ರಿಯನ್ನು ಸಂಪರ್ಕಿಸಬಹುದಿತ್ತು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.