ADVERTISEMENT

ಕಾಶ್ಮೀರದಲ್ಲಿ ಭಯೋತ್ಪಾದನೆಗೆ ನೆರವು; ಯಾಸಿನ್‌ ಮಲಿಕ್‌ಗೆ ಎರಡು ಜೀವಾವಧಿ ಶಿಕ್ಷೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2022, 13:18 IST
Last Updated 25 ಮೇ 2022, 13:18 IST
ಅಪರಾಧಿ ಯಾಸಿನ್‌ ಮಲಿಕ್
ಅಪರಾಧಿ ಯಾಸಿನ್‌ ಮಲಿಕ್   

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಅಸ್ಥಿರತೆ ಸೃಷ್ಟಿಸಲು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ನೆರವು ನೀಡಿರುವ ಪ್ರಕರಣದಲ್ಲಿ ಯಾಸಿನ್‌ ಮಲಿಕ್‌ಗೆ(56) ದೆಹಲಿ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಯಾಸಿನ್‌ಗೆ ಎರಡು ಜೀವಾವಧಿ ಶಿಕ್ಷೆಗಳನ್ನು ವಿಧಿಸಲಾಗಿದೆ. ಅದರೊಂದಿಗೆ ಹತ್ತು ಅಪರಾಧಗಳಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10 ಲಕ್ಷ ದಂಡ ವಿಧಿಸಲಾಗಿದೆ ಎಂದು ಅಡ್ವೊಕೇಟ್‌ ಉಮೇಶ್‌ ಶರ್ಮಾ ತಿಳಿಸಿದ್ದಾರೆ.

ಶಿಕ್ಷೆ ಪ್ರಮಾಣ ಘೋಷಣೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಬಂದ್‌ ವಾತಾವರಣ ನಿರ್ಮಾಣವಾಗಿದ್ದು, ಕೆಲವು ಅಂಗಡಿಗಳು, ವ್ಯಾಪಾರ ವಹಿವಾಟು ಸ್ಥಗಿತಗೊಂಡಿವೆ. ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆಯಾಗದಂತೆ ಭದ್ರತಾ ಪಡೆಗಳನ್ನು ನಿಯೋಜಿಸಿರುವುದಾಗಿ ವರದಿಯಾಗಿದೆ.

ADVERTISEMENT

ಯಾಸಿನ್‌ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ದೆಹಲಿ ಕೋರ್ಟ್‌ಗೆ ಕೋರಿತ್ತು. ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್‌ ಫ್ರಂಟ್‌ (ಜೆಕೆಎಫ್‌ಎಫ್‌) ಮುಖಂಡ ಯಾಸಿನ್‌ 2017ರಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವು ನೀಡಿರುವ ಆರೋಪಗಳು ಸಾಬೀತಾಗಿತ್ತು ಹಾಗೂ ಪ್ರಕರಣದಲ್ಲಿ ಯಾಸಿನ್‌ ಅಪರಾಧಿ ಎಂದು ನ್ಯಾಯಾಲಯವು ಕಳೆದ ವಾರ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು.

ಯಾಸಿನ್‌ಗೆ ಮರಣದಂಡನೆ ವಿಧಿಸಬೇಕು, ಕನಿಷ್ಠ ಜೀವಾವಧಿ ಶಿಕ್ಷೆ ನೀಡಬೇಕು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣ್‌ ಸಿಂಗ್‌ ಅವರಿಗೆ ಎನ್‌ಐಎ ಕೋರಿತ್ತು. ಯಾಸಿನ್‌ ವಿರುದ್ಧ ವಿಧಿಸಬಹುದಾದ ದಂಡದ ಮೊತ್ತವನ್ನು ನಿರ್ಧರಿಸಲು ಅವರ ಆರ್ಥಿಕ ಸ್ಥಿತಿಗತಿಯ ಬಗ್ಗೆ ಅಫಿಡವಿಟ್‌ ಸಲ್ಲಿಸುವಂತೆ ಕೋರ್ಟ್‌ ಎನ್ಐಎಗೆ ನಿರ್ದೇಶಿಸಿತ್ತು.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಸೆಕ್ಷನ್ 16 (ಭಯೋತ್ಪಾದನೆ), 17 (ಭಯೋತ್ಪಾದನೆಗೆ ದೇಣಿಗೆ ಸಂಗ್ರಹ), 18 (ಭಯೋತ್ಪಾದಕ ಕೃತ್ಯಕ್ಕೆ ಸಂಚು) ಹಾಗೂ 20 (ಭಯೋತ್ಪಾದಕ ಸಂಘಟನೆ ಸದಸ್ಯ) ಸೆಕ್ಷನ್ 120–ಬಿ (ಅಪರಾಧ ಸಂಚು) ಮತ್ತು ಭಾರತೀಯ ದಂಡಸಂಹಿತೆಯ 124–ಎ (ದೇಶದ್ರೋಹ) ಪ್ರಕರಣಗಳು ಯಾಸಿನ್ ಮೇಲಿದ್ದವು. ಅವುಗಳನ್ನು ಯಾಸಿನ್‌ ನಿರಾಕರಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.