ADVERTISEMENT

ಪುಲ್ವಾಮಾ ದಾಳಿ: ತಂತ್ರ ಬದಲಿಸಿದ ಉಗ್ರರು

ತನಿಖಾ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 20:21 IST
Last Updated 19 ಫೆಬ್ರುವರಿ 2019, 20:21 IST
   

ಜಮ್ಮು ಮತ್ತು ಕಾಶ್ಮೀರದಲ್ಲಿ ನಾಡಬಾಂಬ್‌ ಸ್ಫೋಟಿಸಲು ಉಗ್ರರು ಹೊಸ ತಂತ್ರ ಅನುಸರಿಸುತ್ತಿದ್ದಾರೆ. ಕಾರು ಮತ್ತು ಬೈಕ್‌ನ ರಿಮೋಟ್‌ ಕೀ (ಸೆಂಟರ್ ಲಾಕಿಂಗ್ ಕೀ) ಬಳಸಿ ನಾಡಬಾಂಬ್ ಸ್ಫೋಟಿಸುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದಿದ್ದ ದಾಳಿಯ ಕೂಲಂಕಷ ಪರಿಶೀಲನೆಯ ನಂತರ ಈ ಅಂಶ ಬಹಿರಂಗವಾಗಿದೆ. ಉಗ್ರರ ಈ ತಂತ್ರವನ್ನು ಎದುರಿಸಲು ಭದ್ರತಾ ಪಡೆಗಳು ಹೊಸ ತಂತ್ರವನ್ನು ರೂಪಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

* ಕಾಶ್ಮೀರಿ ಉಗ್ರರು ಈವರೆಗೆ ವೈರ್‌ ಜೋಡಿಸುವ ಅಥವಾ ಬಾಂಬ್‌ನಲ್ಲಿರುವ ಗುಂಡಿ ಒತ್ತುವ ಮೂಲಕ ನಾಡಬಾಂಬ್‌ಗಳನ್ನು ಸ್ಫೋಟಿಸುತ್ತಿದ್ದರು

ADVERTISEMENT

* ಬಹುತೇಕ ಆತ್ಮಹತ್ಯಾ ದಾಳಿಕೋರರು ಇದೇ ತಂತ್ರ ಅನುಸರಿಸುತ್ತಿದ್ದರು. ಭದ್ರತಾ ಪಡೆಗಳ ಮೇಲೆ ಹೆಚ್ಚು ನಿಖರವಾಗಿ ದಾಳಿ ನಡೆಸಲು ಈ ತಂತ್ರಕ್ಕೆ ಮೊರೆ ಹೋಗಿದ್ದರು

* ಕಾರಿನ ರಿಮೋಟ್ ಕೀ ಬಳಸಿ ಬಾಂಬ್‌ ಸ್ಫೋಟಿಸುವ ತಂತ್ರವನ್ನು ನಕ್ಸಲರು ಅನುಸರಿಸುತ್ತಿದ್ದರು. ಇದೇ ತಂತ್ರಕ್ಕೆ ಕಾಶ್ಮೀರಿ ಉಗ್ರರೂ ಮೊರೆ ಹೋಗಿದ್ದಾರೆ

* ಹೀಗಾಗಿಯೇ ಉಗ್ರರು ಮತ್ತು ನಕ್ಸಲರ ಮಧ್ಯೆ ಸಂಪರ್ಕವಿದೆಯೇ ಎಂಬುದರ ಬಗ್ಗೆ ಭದ್ರತಾಪಡೆಗಳು ಅನುಮಾನ ವ್ಯಕ್ತಪಡಿಸಿವೆ

* ಸೇನೆಗಳು ಬಳಸುವ ಗುಣಮಟ್ಟದ ಸ್ಫೋಟಕಗಳನ್ನು ಉಗ್ರರು ಬಳಸುತ್ತಿದ್ದಾರೆ

ಸ್ವರಕ್ಷಣೆಗೆ ರಿಮೋಟ್ ಮೊರೆ
ಈಚಿನ ದಿನಗಳಲ್ಲಿ ಉಗ್ರರ ವಿರುದ್ಧ ಭದ್ರತಾಪಡೆಗಳು ಪ್ರತಿದಿನ ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿದಿನವೂ ಉಗ್ರರು ಬಲಿಯಾಗುತ್ತಿದ್ದಾರೆ. ಆತ್ಮಹತ್ಯಾ ಬಾಂಬ್‌ ದಾಳಿಗೆ ಮುಂದಾದರೆ ಮತ್ತಷ್ಟು ಸದಸ್ಯರನ್ನು ಕಳೆದುಕೊಳ್ಳುವ ಭಯದಲ್ಲಿವೆ ಉಗ್ರಗಾಮಿ ಸಂಘಟನೆಗಳು. ಹೀಗಾಗಿ ತಮ್ಮವರನ್ನು ಕಳೆದುಕೊಳ್ಳದೆಯೇ ಭದ್ರತಾ ಪಡೆ ಮೇಲೆ ದಾಳಿ ನಡೆಸುವ ತಂತ್ರಗಾರಿಕೆಗಳಿಗೆ ಉಗ್ರರು ಮೊರೆ ಹೋಗಿದ್ದಾರೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ರಿಮೋಟ್ ಬಳಕೆಯ ಅನುಕೂಲಗಳನ್ನೂ ತಜ್ಞರು ಈ ಮುಂದಿನಂತೆ ವಿವರಿಸಿದ್ದಾರೆ

* ಭದ್ರತಾ ಪಡೆಗಳ ಪ್ರತಿದಾಳಿಗೆ ಸಿಲುಕಿಕೊಳ್ಳಬಾರದು ಎಂದು ಈ ತಂತ್ರಕ್ಕೆ ಮೊರೆ ಹೋಗಿದ್ದಾರೆ
* ಕಾರಿನ ಸೆಂಟ್ರಲ್‌ ಲಾಕಿಂಗ್ ಉಪಕರಣಗಳು ಮಾರುಕಟ್ಟೆಯಲ್ಲಿ ಮುಕ್ತವಾಗಿ ಲಭ್ಯವಿದೆ. ಇದರ ವೆಚ್ಚ ತೀರಾ ಕಡಿಮೆ
* ಈ ಉಪಕರಣವು ಕರಾರುವಕ್ಕಾಗಿ ಕೆಲಸ ಮಾಡುವುದರಿಂದ, ಸ್ಫೋಟ ವಿಫಲವಾಗುವ ಸಾಧ್ಯತೆ ಕಡಿಮೆ. ಹೀಗಾಗಿಯೂ ಇದರ ಬಳಕೆ ಹೆಚ್ಚುತ್ತಿದೆ
* ಮೊಬೈಲ್‌ ಮತ್ತು ವಾಕಿ–ಟಾಕಿಗಳಿಗಿಂತ ಈ ಉಪಕರಣವನ್ನು ಬಳಸಿಕೊಂಡು ನಾಡಬಾಂಬ್ ತಯಾರಿಕೆ ಸುಲಭ. ಒಂದಿನಿತೂ ಮಾರ್ಪಡಿಸದೆ ಈ ಉಪಕರಣವನ್ನು ಬಾಂಬ್‌ ತಯಾರಿಕೆಗೆ ಬಳಸಬಹುದು

ಇಸ್ರೇಲ್ ನೆರವಿನ ಭರವಸೆ
ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತಕ್ಕೆ ಎಲ್ಲ ಸ್ವರೂಪದ ನೆರವು ನೀಡಲು ಸಿದ್ಧರಿದ್ದೇವೆ ಎಂದು ಇಸ್ರೇಲ್ ಹೇಳಿದೆ.

‘ಭಾರತ ನಮ್ಮ ಆಪ್ತ ಮತ್ತು ಅತ್ಯಂತ ಮಹತ್ವದ ಗೆಳೆಯ. ಹೀಗಾಗಿ ಭಾರತಕ್ಕೆ ಬೇಷರತ್ ನೆರವು ನೀಡಲು ಸಿದ್ಧರಿದ್ದೇವೆ. ನಮ್ಮ ನೆರವಿಗೆ ಮಿತಿಯೇ ಇರುವುದಿಲ್ಲ’ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಹೇಳಿದೆ.

ತನ್ನ ಮೇಲೆ ದಾಳಿ ನಡೆಸುವ ಉಗ್ರರ ವಿರುದ್ಧ ಅತ್ಯಂತ ಕರಾರುವಕ್ಕಾಗಿ ಮತ್ತು ಕ್ಷಿಪ್ರವಾಗಿ ದಾಳಿ ನಡೆಸುವುದಕ್ಕೆ ಇಸ್ರೇಲ್ ಹೆಸರುವಾಸಿಯಾಗಿದೆ.

ರಿಮೋಟ್ ಬಳಸಿದ್ದ ಅದಿಲ್
ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ನಡೆಸಿದ್ದ ಉಗ್ರಅದಿಲ್ ಅಹ್ಮದ್ ದಾರ್‌ ಸಹ ಕಾರಿನ ರಿಮೋಟ್ ಬಳಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. ಎಸ್‌ಯುವಿಯನ್ನು ಭದ್ರತಾ ಸಿಬ್ಬಂದಿ ಇದ್ದ ಬಸ್‌ಗೆ ಡಿಕ್ಕಿ ಹೊಡೆಸಿದ ತಕ್ಷಣ ಬಾಂಬ್ ಸ್ಫೋಟಿಸುವ ಸಾಧ್ಯತೆ ಕಡಿಮೆ ಇತ್ತು. ಹೀಗಾಗಿ ಆತ ರಿಮೋಟ್ ಕೀ ಬಳಸಿದ್ದ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.