
ಮುಂಬೈ: ತಿಂಗಳುಗಳ ಕಾಲ ನಡೆದ ಮಾತುಕತೆಯ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನೆ (ಯುಬಿಟಿ) ಮತ್ತು ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಮುಂಬರುವ ಮಹಾರಾಷ್ಟ್ರ ಪಾಲಿಕೆ ಚುನಾವಣೆಗಳಿಗೆ ಚಾಲನೆ ನೀಡುವ ಸಲುವಾಗಿ ಬುಧವಾರ ಔಪಚಾರಿಕ ಚುನಾವಣಾ ಮೈತ್ರಿಯನ್ನು ಘೋಷಿಸಲಿವೆ.
ಜುಲೈ ತಿಂಗಳಲ್ಲಿ ಉದ್ಧವ್ ಮತ್ತು ರಾಜ್ ಠಾಕ್ರೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಮಹಾರಾಷ್ಟ್ರ ಸರ್ಕಾರ ಹೊರಡಿಸಿದ್ದ 1–5ನೇ ತರಗತಿವರೆಗಿನ ಮರಾಠಿ ಮತ್ತು ಇಂಗ್ಲಿಷ್ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಪರಿಚಯಿಸುವ ಹೊಸ ಶಿಕ್ಷಣ ನೀತಿಯಡಿಯ ತ್ರಿಭಾಷಾ ಸೂತ್ರ ಮೇಲಿನ ಎರಡು ಆದೇಶವನ್ನು ಹಿಂತೆದುಕೊಳ್ಳುವಂತೆ ಒತ್ತಾಯಿಸಿದ್ದರು.
ಈ ನಡುವೆ, ವಲಸಿಗ ವಿರೋಧಿ ನಿಲುವು ಮತ್ತು ಇತರ ನೀತಿಗಳ ಕಾರಣಕ್ಕಾಗಿ ರಾಜ್ ಅವರ ಪಕ್ಷವೂ ವಿರೋಧ ಪಕ್ಷಕ್ಕೆ ಸೇರುವುದನ್ನು ಕಾಂಗ್ರೆಸ್ ನಿರ್ಬಂಧಿಸಿದ್ದರಿಂದ ಮಹಾ ವಿಕಾಸ್ ಆಘಾಡಿಯಲ್ಲಿ ಬಿರುಕುಗಳು ಹುಟ್ಟಿಕೊಂಡವು.
ಇಬ್ಬರೂ ಠಾಕ್ರೆಗಳ ನೇತೃತ್ವದ ಎರಡೂ ಪಕ್ಷಗಳು ಆರ್ಥಿಕ ರಾಜಧಾನಿ ಮುಂಬೈ ಸೇರಿದಂತೆ ರಾಜ್ಯದ 29 ಮಹಾನಗರ ಪಾಲಿಕೆಗಳ ಸುಮಾರು ಅರ್ಧ ಡಜನ್ ಸ್ಟಾನಗಳಲ್ಲಿ ಒಟ್ಟಾಗಿ ಸ್ಪರ್ಧಿಸುವ ನಿರೀಕ್ಷೆಯಿದೆ. ಅವಿಭಜಿತ ಶಿವಸೇನೆ 25 ವರ್ಷಗಳ ಕಾಲ ನಿಯಂತ್ರಣ ಹೊಂದಿದ್ದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಷೊರೇಷನ್ (ಬಿಎಂಸಿ) ಚುನಾವಣೆ ಅವರಿಗೆ ನಿರ್ಣಾಯಕವಾಗಿದೆ.
ಠಾಕ್ರೆಗಳಿಬ್ಬರ ಮೈತ್ರಿಯಿಂದ ಏನೂ ಬದಲಾಗುವುದಿಲ್ಲ. ಈ ಮೈತ್ರಿ ಅವರಿಗಾಗಿ ಮಾಡಲಾಗಿದ್ದು ಮರಾಠಿ–ಮನೂಸ್ ಪ್ರತಿಪಾದನೆ ಕೇವಲ ಘೋಷಣೆ ಮಾತ್ರಸಂಜಯ್ ಶಿರ್ಸತ್ ಶಿವಸೇನೆ (ಶಿಂಧೆ) ನಾಯಕ
ಕಾಂಗ್ರೆಸ್ ಎನ್‌ಸಿಪಿ ಏಕಾಂಗಿ ಸ್ಪರ್ಧೆ ಮುಂಬೈ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ಮತ್ತೊಮ್ಮೆ ಪುನರುಚ್ಚರಿಸಿದೆ. ಆದರೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಮುಂಬೈನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲಿದೆಯೊ ಅಥವಾ ಠಾಕ್ರೆಗಳ ಪಕ್ಷದ ಜೊತೆ ಮೈತ್ರಿ ಮಾಡಲಿದೆಯೆ ಎಂಬುವುದು ಇನ್ನೂ ತಿಳಿಸಿಲ್ಲ. ಪ್ರಸ್ತುತ ಬಿಜೆಪಿ ನೇತೃತ್ವದ ಆಡಳಿತರೂಢ ಮಹಾಯುತಿ ಮೈತ್ರಿಯಲ್ಲಿರುವ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.