ಮರಣದಂಡನೆ
(ಐಸ್ಟೋಕ್ ಚಿತ್ರ)
ಠಾಣೆ: ಕುಟುಂಬ ಸದಸ್ಯರ ಮೇಲೆ ಹಲ್ಲೆ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಸೋದರರಿಬ್ಬರಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದೇ ದಿನ ಮರಣದಂಡನೆ ಶಿಕ್ಷೆ ಪ್ರಕಟವಾದ ಅಪರೂಪದ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದೆ.
ಸೆ. 12ರಂದು ಶಿಕ್ಷೆ ಪ್ರಕಟಿಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ಬಿ. ಅಗರವಾಲ್ ಅವರ ಆದೇಶ ಪ್ರತಿ ಬುಧವಾರ ಲಭ್ಯವಾಗಿದೆ.
ಆಟೋ ರಿಕ್ಷಕ್ಕಾಗಿ ಪ್ರತಿದಿನ ನೀಡುತ್ತಿದ್ದ ₹20ಕ್ಕೆ ತನ್ನ ತಾಯಿಯನ್ನೇ 2021ರಲ್ಲಿ ಕೊಲೆ ಮಾಡಿದ ಅಪರಾಧದಡಿ ವಿಶಾಲ್ ಅರುಣ್ ಅಲ್ಜಾಂಡೆ ಎಂಬಾತನಿಗೆ ನ್ಯಾಯಾಧೀಶರು ಮರಣದಂಡನೆ ಪ್ರಕಟಿಸಿದರು. ಕೃತ್ಯಕ್ಕೆ ಸ್ಕ್ರೂಡ್ರೈವರ್ ಬಳಸಿದ್ದ ಅಪರಾಧಿ, 50 ಬಾರಿ ಇರಿದು ತನ್ನ ತಾಯಿಯನ್ನು ಕೊಲೆ ಮಾಡಿ ವಿಕೃತಿ ಮೆರೆದಿದ್ದ ಎಂದು ಪ್ರಾಸಿಕ್ಯೂಷನ್ ವಕೀಲರು ಹೇಳಿದ್ದಾರೆ.
ಈತನ ಸೋದರ ವಿಷ್ಣು ಎಂಬಾತ 2016ರಲ್ಲಿ ತನ್ನ ಅಜ್ಜಿ ಮತ್ತು ಚಿಕ್ಕಪ್ಪನನ್ನು ಕೊಲೆ ಮಾಡಿದ್ದ. ಜತೆಗೆ ತನ್ನ ತಂದೆಯನ್ನು ಕೊಲೆ ಮಾಡಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದ. ಆದರೆ ಅದರಲ್ಲಿ ಸಾಕ್ಷಿಯ ಕೊರತೆಯಿಂದ ಈತ ಖುಲಾಸೆಯಾಗಿದ್ದ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲದ್ವಾಂಜರಿ ಮತ್ತು ರಶ್ಮಿ ಕ್ಷೀರಸಾಗರ ಅವರು ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.