ಬೆಂಕಿ ಅವಘಡ
(ಸಾಂಕೇತಿಕ ಚಿತ್ರ)
ಠಾಣೆ: ಮಹಾರಾಷ್ಟ್ರದ ಠಾಣೆ ನಗರದ ಖಾಸಗಿ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಬುಧವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರುತು ಪಾರ್ಕ್‌ನಲ್ಲಿರುವ ಎರಡು ಅಂತಸ್ತಿನ ಆಸ್ಪತ್ರೆಯಲ್ಲಿ ಬೆಳಿಗ್ಗೆ 10.37ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಸಣ್ಣ ಅವಘಡ ಇದಾಗಿದ್ದು ಯಾರೂ ಗಾಯಗೊಂಡಿಲ್ಲ ಎಂದು ಠಾಣೆ ಮುನ್ಸಿಪಲ್ ಕಾರ್ಪೊರೇಷನ್‌ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತಡ್ವಿ ತಿಳಿಸಿದ್ದಾರೆ.
ಆಸ್ಪತ್ರೆಯ ತೀವ್ರ ನಿಗಾ ಘಟಕದ (ಐಸಿಯು) ವೆಂಟಿಲೇಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಗೆ ಕಾರಣವೇನೆಂದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆ ವೇಳೆ ಆರು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ 66 ವರ್ಷ ವಯಸ್ಸಿನ ಒಬ್ಬರು ಐಸಿಯುನಲ್ಲಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದ್ದಾರೆ.
ಸಾಮಾನ್ಯ ವಾರ್ಡ್‌ನಲ್ಲಿರುವ ಇತರ ರೋಗಿಗಳು ಸಹ ಸುರಕ್ಷಿತವಾಗಿದ್ದಾರೆ ಎಂದು ತಡ್ವಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ನಂತರ, ಸ್ಥಳೀಯ ಅಗ್ನಿಶಾಮಕ ದಳ ಮತ್ತು ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ತಂಡವು ಸ್ಥಳಕ್ಕೆ ಧಾವಿಸಿ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಬೆಂಕಿಯನ್ನು ನಂದಿಸಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.