ಠಾಣೆ(ಮಹಾರಾಷ್ಟ್ರ): ವಿದ್ಯಾರ್ಥಿನಿಯರು ಮುಟ್ಟಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ ಅವರ ಬಟ್ಟೆಗಳನ್ನು ತೆಗೆಸಿದ ಆರೋಪಕ್ಕೆ ಸಂಬಂಧಿಸಿ ಜಿಲ್ಲೆಯ ಖಾಸಗಿ ಶಾಲೆಯೊಂದರ ಪ್ರಾಂಶುಪಾಲ ಹಾಗೂ ಸಿಬ್ಬಂದಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಶಹಾಪುರದಲ್ಲಿನ ಶಾಲೆಯೊಂದರಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ‘ಶಾಲೆಯ ಪ್ರಾಂಶುಪಾಲ ಹಾಗೂ ವಿದ್ಯಾರ್ಥಿನಿಯರ ಬಟ್ಟೆಗಳನ್ನು ತೆಗೆದು, ಮುಟ್ಟಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅವರ ಗುಪ್ತಾಂಗ ಪರಿಶೀಲಿಸಿದ್ದರು ಎನ್ನಲಾದ ಮಹಿಳಾ ಸಿಬ್ಬಂದಿಯನ್ನು ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ’ ಎಂದು ಶಹಾಪುರ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಈ ಘಟನೆಯಲ್ಲಿ ಪಾತ್ರ ಇದೆ ಎನ್ನಲಾದ ನಾಲ್ವರು ಶಿಕ್ಷಕರು ಸೇರಿ ಆರು ಜನ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ’ ಎಂದೂ ಹೇಳಿದ್ದಾರೆ.
‘ಘಟನೆ ಕುರಿತಂತೆ ತನಿಖೆ ನಡೆಸಿ, ಸಮಗ್ರ ವರದಿ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ(ಬಿಇಒ) ಸೂಚಿಸಲಾಗಿದೆ. ಈ ವರದಿ ಆಧಾರದಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ’ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ಬಾಳಾಸಾಹೇಬ ರಕ್ಷೆ ತಿಳಿಸಿದ್ದಾರೆ.
‘ಈ ಘಟನೆ ನಡೆದ ಬೆನ್ನಲ್ಲೇ, ಪ್ರಾಂಶುಪಾಲರನ್ನು ಸೇವೆಯಿಂದ ವಜಾ ಮಾಡಲಾಗಿದೆ’ ಎಂದು ರಕ್ಷೆ ತಿಳಿಸಿದ್ದಾರೆ.
ಘಟನೆ: ‘ಶಾಲೆಯ ಶೌಚಾಲಯದಲ್ಲಿ ಮಂಗಳವಾರ ರಕ್ತದ ಕಲೆಗಳು ಕಂಡುಬಂದಿವೆ. ಆಗ, ಶಾಲೆಯ ಪ್ರಾಂಶುಪಾಲರು, 5 ರಿಂದ 10 ನೇ ತರಗತಿ ವರೆಗೆ ಕಲಿಯುತ್ತಿರುವ ವಿದ್ಯಾರ್ಥಿನಿಯರನ್ನು ಶಾಲೆಯ ಸಭಾಂಗಣಕ್ಕೆ ಕರೆದಿದ್ದಾರೆ’ ಎಂದು ಪಾಲಕರೊಬ್ಬರು ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
‘ಶೌಚಾಲಯ ಹಾಗೂ ನೆಲಹಾಸಿನ ಮೇಲೆ ಬಿದ್ದಿದ್ದ ರಕ್ತದ ಕಲೆಗಳ ಚಿತ್ರಗಳನ್ನು ಪ್ರೊಜೆಕ್ಟರ್ ಮೂಲಕ ವಿದ್ಯಾರ್ಥಿನಿಯರಿಗೆ ತೋರಿಸಿ, ಯಾರಾದರೂ ಮುಟ್ಟಾಗಿದ್ದೀರಾ ಎಂದು ಕೇಳಿದ್ದಾರೆ. ನಂತರ, ಮುಟ್ಟಾಗಿರುವುದಾಗಿ ಹೇಳಿದವರ ಹೆಬ್ಬೆರಳು ಗುರುತು ಪಡೆಯಲಾಗಿದೆ. ಉಳಿದ ವಿದ್ಯಾರ್ಥಿನಿಯರ ಪೈಕಿ ಒಬ್ಬೊಬ್ಬರನ್ನಾಗಿ ಶೌಚಾಲಯಕ್ಕೆ ಕರೆದುಕೊಂಡು ಹೋಗಿರುವ ಮಹಿಳಾ ಸಿಬ್ಬಂದಿಯೊಬ್ಬರು, ಅವರ ಬಟ್ಟೆಗಳನ್ನು ತೆಗೆದು, ಗುಪ್ತಾಂಗ ಪರಿಶೀಲಿಸಿದ್ದಾರೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ವಿಚಾರ ಗೊತ್ತಾದ ನಂತರ, ಪಾಲಕರು ಶಾಲೆ ಬಳಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದರು’ ಎಂದು ಹೆಚ್ಚುವರಿ ಎಸ್‌ಪಿ (ಗ್ರಾಮೀಣ) ರಾಹುಲ್ ಝಲ್ತೆ ತಿಳಿಸಿದ್ದಾರೆ.
ಪ್ರಸ್ತಾಪ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ಘಟನೆ ಗುರುವಾರ ಪ್ರಸ್ತಾಪಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕರು ಆಗ್ರಹಿಸಿದರು.
‘ವಿದ್ಯಾರ್ಥಿನಿಯರ ಬಟ್ಟೆಗಳನ್ನು ತೆಗೆಯುವಂತೆ ಸೂಚಿಸಿದ್ದ ಪ್ರಾಂಶುಪಾಲರೂ ಕೂಡ ಒಬ್ಬ ಮಹಿಳೆಯೇ ಆಗಿದ್ದಾರೆ’ ಎಂದು ಎನ್‌ಸಿಪಿ(ಶರದ್ ಪವಾರ್) ಶಾಸಕ ಜಿತೇಂದ್ರ ಅವ್ಹಾದ್ ಆರೋಪಿಸಿದ್ದಾರೆ.
‘ಎಲ್ಲ ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ವೆಂಡಿಂಗ್ ಯಂತ್ರಗಳನ್ನು ಅಳವಡಿಸಬೇಕು ಹಾಗೂ ನೀರಿನ ಸೌಲಭ್ಯ ಕಲ್ಪಿಸಬೇಕು’ ಎಂದು ಕಾಂಗ್ರೆಸ್ ಶಾಸಕಿ ಜ್ಯೋತಿ ಗಾಯಕ್ವಾಡ್ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.