ADVERTISEMENT

ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಎಡಿಆರ್‌

ಚುನಾವಣಾ ಬಾಂಡ್‌ ವಿವರ ಸಲ್ಲಿಕೆಗೆ ಜೂ.30ರ ವರೆಗೆ ಸಮಯ ಕೇಳಿರುವ ಎಸ್‌ಬಿಐ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 13:20 IST
Last Updated 7 ಮಾರ್ಚ್ 2024, 13:20 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲು ಮತ್ತಷ್ಟು ಸಮಯ ಕೇಳಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ವಿರುದ್ಧ ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಸಲ್ಲಿಸಲು ನಿಗದಿ ಮಾಡಲಾಗಿರುವ ಗಡುವನ್ನು ಎಸ್‌ಬಿಐ ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡುತ್ತಿದೆ ಎಂದು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಎಡಿಆರ್‌ ಹೇಳಿದೆ.

‘ಎಡಿಆರ್‌ ಸಲ್ಲಿಸಿರುವ ಅರ್ಜಿ ಕುರಿತು ಇ–ಮೇಲ್‌ ಕಳುಹಿಸಿ. ಈ ಅರ್ಜಿಯನ್ನು ವಿಚಾರಣಾ ಪಟ್ಟಿಗೆ ಸೇರಿಸಲಾಗುವುದು’ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು ವಕೀಲ ಪ್ರಶಾಂತ್‌ ಭೂಷಣ್‌ ಅವರಿಗೆ ತಿಳಿಸಿದೆ.

ADVERTISEMENT

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಸಲ್ಲಿಸಲು ಜೂನ್‌ 30ರವರೆಗೆ ಸಮಯ ನೀಡುವಂತೆ ಕೋರಿ ಎಸ್‌ಬಿಐ ಸೋಮವಾರವಷ್ಟೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಎಡಿಆರ್‌ ವಾದವೇನು?

‘ಚುನಾವಣಾ ಬಾಂಡ್‌ಗಳ ಖರೀದಿ ಮತ್ತು ನಗದೀಕರಣಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಒದಗಿಸಲು ಮಾರ್ಚ್‌ 6ರ ಗಡುವನ್ನು ನೀಡಲಾಗಿತ್ತು. ಆದರೆ, ಗಡುವು ಮುಗಿಯಲು ಎರಡು ದಿನಗಳು ಬಾಕಿ ಇರುವಾಗ ಜೂನ್‌ 30ರವರೆಗೆ ಸಮಯಾವಕಾಶ ನೀಡುವಂತೆ ಕೋರಿ ಎಸ್‌ಬಿಐ ಉದ್ದೇಶಪೂರ್ವಕವಾಗಿ ಅರ್ಜಿ ಸಲ್ಲಿಸಿದೆ’ ಎಂದು ಎಡಿಆರ್‌ ದೂರಿದೆ.

‘ದಾನಿಗಳ ಹಾಗೂ ದೇಣಿಗೆ ಮೊತ್ತ ಕುರಿತ ವಿವರಗಳನ್ನು ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನ ಬಹಿರಂಗಗೊಳ್ಳದಂತೆ ನೋಡಿಕೊಳ್ಳುವ ಉದ್ದೇಶದಿಂದ ಎಸ್‌ಬಿಐ ಈ ಅರ್ಜಿ ಸಲ್ಲಿಸಿದೆ’ ಎಂದೂ ಎಡಿಆರ್‌ ಆರೋಪಿಸಿದೆ.

‘ರಾಜಕೀಯ ಪಕ್ಷಗಳು ಕಾರ್ಪೋರೇಟ್‌ ಸಂಸ್ಥೆಗಳು ಹಾಗೂ ಚುನಾವಣಾ ಬಾಂಡ್‌ಗಳ ಮೂಲಕ ಬೃಹತ್ ಮೊತ್ತದ ಹಣವನ್ನು ಸ್ವೀಕರಿಸಿವೆ. ಈ ಕುರಿತ ವಿವರಗಳನ್ನು ಪಡೆಯುವ ಹಕ್ಕನ್ನು ನಾಗರಿಕರು ಹೊಂದಿದ್ದಾರೆ. ಆದರೆ, ವಿವರಗಳನ್ನು ಬಹಿರಂಗಪಡಿಸಲು ಎಸ್‌ಬಿಐ ನಿರಾಕರಿಸುತ್ತಿದೆ. ಎಸ್‌ಬಿಐನ ಇಂತಹ ಪಾರದರ್ಶಕವಲ್ಲದ ಹಾಗೂ ಉತ್ತರಾಯಿತ್ವರಹಿತ ನಡೆ ಖಂಡನೀಯ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

‘ಈ ವಿಚಾರವಾಗಿ ಜನರ ದನಿಯನ್ನು ಹತ್ತಿಕ್ಕುವ ಉದ್ದೇಶವಿರುವುದು ಸ್ಪಷ್ಟವಾಗುತ್ತದೆ. ಅಲ್ಲದೇ, ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಗಳ ಕುರಿತು ಲೆಕ್ಕಪರಿಶೋಧನೆ ನಡೆಸುವ ಜನರ ಹಕ್ಕನ್ನು ದಮನ ಮಾಡಿದಂತಾಗುತ್ತದೆ. ಹಾಗಾಗಿ, ಈ ವಿಷಯವನ್ನು ಗಂಭೀರವಾದ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಬೇಕು’ ಎಂದೂ ಎಡಿಆರ್‌ ಹೇಳಿದೆ.

ಚುನಾವಣಾ ಬಾಂಡ್‌ ಯೋಜನೆ ಅಸಾಂವಿಧಾನಿಕ ಎಂಬುದಾಗಿ ಫೆ.15ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಅಲ್ಲದೇ, ದಾನಿಗಳ ಹಾಗೂ ಚುನಾವಣಾ ಬಾಂಡ್‌ಗಳ ಮೂಲಕ ಹಣ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಮಾರ್ಚ್‌ 6ರ ಒಳಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್‌ಬಿಐಗೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.