ಪ
ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ, ವಿರೋಧ ಪಕ್ಷಗಳ ಕೂಟ ‘ಇಂಡಿಯಾ’ದ ಅಭ್ಯರ್ಥಿಯಾಗಿರುವ ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗಳನ್ನು ಬಿಜೆಪಿ ಸೋಮವಾರ ಸಮರ್ಥಿಸಿಕೊಂಡಿದೆ.
ಶಾ ಅವರ ಹೇಳಿಕೆಗಳನ್ನು ಟೀಕಿಸಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕೆಲ ಕಾನೂನು ಪಂಡಿತರು ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ, ಬಿಜೆಪಿಯಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುದರ್ಶನ ರೆಡ್ಡಿಯವರು ನಿವೃತ್ತ ನ್ಯಾಯಮೂರ್ತಿ. ಈಗ ನೀವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೀರಿ ಎಂದ ಮೇಲೆ ನಿಮ್ಮ ಎಲ್ಲ ಕೆಲಸಗಳು ಹಾಗೂ ನಡೆಗಳನ್ನು ಪ್ರಶ್ನಿಸಲಾಗುತ್ತದೆ’ ಎಂದು ಬಿಜೆಪಿ ವಕ್ತಾರ ರವಿಶಂಕರ ಪ್ರಸಾದ್ ಹೇಳಿದರು.
‘ಸುದರ್ಶನ ರೆಡ್ಡಿ ಅವರು 2011ರಲ್ಲಿ ನೀಡಿದ್ದ ತೀರ್ಪಿನಿಂದ ನಕ್ಸಲರ ವಿರುದ್ಧದ ಹೋರಾಟದಲ್ಲಿ ಸರ್ಕಾರ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಹೀಗಾಗಿ, ಅವರು ಪ್ರಕಟಿಸಿದ್ದ ತೀರ್ಪಿನ ಕುರಿತು ಶಾ ಹೇಳಿಕೆ ನೀಡಿದ್ದಾರೆ’ ಎಂದರು.
‘ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ಹಾಗೂ ಕೆಲ ನ್ಯಾಯಮೂರ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಇಲ್ಲವೇ ಆಯ್ಕೆಯಾಗಿದ್ದರು. ಆಗ, ಅವರ ಆಯ್ಕೆ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆ ಎತ್ತಿದ್ದವು. ಈಗ, ನಿವೃತ್ತ ನ್ಯಾಯಮೂರ್ತಿ ರೆಡ್ಡಿ ಅವರನ್ನು ಶಾ ಪ್ರಶ್ನಿಸಿದ್ದರಲ್ಲಿ ತಪ್ಪೇನಿದೆ?’ ಎಂದರು.
ಅವರು, ನಿವೃತ್ತ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಈ ಮಾತು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.