ನವದೆಹಲಿ: ನಿನ್ನೆದೆಹಲಿಯ ಸಿಂಘು ಗಡಿಯಲ್ಲಿ ಸ್ಥಳಿಯರ ಜೊತೆ ಘರ್ಷಣೆ ಸಂದರ್ಭ ಅಲಿಪುರ್ ಠಾಣಾಧಿಕಾರಿ ಪ್ರದೀಪ್ ಪಲಿವಾಲ್ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿದ್ದ ವ್ಯಕ್ತಿ ಸೇರಿ 44 ಜನರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕೊಲೆ ಯತ್ನ ಮತ್ತು ಸಾರ್ವಜನಿಕ ಸೇವೆಗೆ ಅಡ್ಡಿ ಆರೋಪದಡಿ ಬಂಧನಕ್ಕೆ ಒಳಪಡಿಸಲಾಗಿದೆ. ಬಂಧಿತನನ್ನು ಪಂಜಾಬ್ ಮೂಲದ 22 ವರ್ಷದ ರಂಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ನಿನ್ನೆ ಪ್ರತಿಭಟನಾ ಸ್ಥಳ ಖಾಲಿ ಮಾಡಿ, ಗಡಿ ತೆರೆಯುವಂತೆ ಮನವಿ ಮಾಡಲು 200ಕ್ಕೂ ಅಧಿಕ ಹಳ್ಳಿಗರು ಕಿಸಾನ್ ಮಜದೂರ್ ಸಂಘರ್ಷ ಸಮಿತಿ ಮುಖಂಡರ ಭೇಟಿಗೆ ಅಲಿಪುರ್ ಪ್ರದೇಶಕ್ಕೆ ಬಂದಿದ್ದರು.
ಕಳೆದ ಎರಡು ತಿಂಗಳಿಂದ ಪ್ರತಿಭಟನಾನಿರತರಿಗೆ ಊಟ, ತಿಂಡಿ ಕೊಟ್ಟು ಸಹಕರಿಸಿದ್ದೇವೆ. ಆದರೆ, ಈಗ ಅವರ ಪ್ರತಿಭಟನೆ ನಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ, ಜಾಗ ತೆರವು ಮಾಡುವಂತೆ ಮನವಿ ಮಾಡಲು ಹಳ್ಳಿಗರು ಬಂದಿದ್ದರು. ಈ ಸಂದರ್ಭ ರೈತರು ವಿರೋಧ ವ್ಯಕ್ತಪಡಿಸಿದ್ದು, ಬ್ಯಾರಿಕೇಡ್ ತಳ್ಳಿದ್ದಾರೆ. ತಳ್ಳಾಟ, ನೂಕಾಟದ ಬಳಿಕ ಕಲ್ಲುತೂರಾಟವು ನಡೆದಿದೆ. ಈ ಸಂದರ್ಭ ಮನವೊಲಿಸಲು ಮುಂದಾಗಿದ್ದ ಠಾಣಾಧಿಕಾರಿ ಪಲಿವಲ್ ಮೇಲೆ ರಂಜೀತ್ ಸಿಂಗ್ ತಲ್ವಾರ್ ನಿಂದ ದಾಳಿ ಮಾಡಿದ್ದ.
ಘಟನೆಯಲ್ಲಿ ಠಾಣಾಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದರು. ಇತರೆ ಐವರು ಪೊಲೀಸ್ಸಿಬ್ಬಂದಿಗೂ ಗಾಯಗಳಾಗಿವೆ.
ಘಟನೆ ಕುರಿತಂತೆ ಅಲಿಪುರ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಮಧ್ಯೆ, ಪ್ರತಿಭಟನಾ ಸ್ಥಳಕ್ಕೆ ಬಂದಿದ್ದವರು ಸ್ಥಳಿಯ ಹಳ್ಳಿಗಳ ಜನರಲ್ಲ, ಮಾರಕಾಸ್ತ್ರ ಹಿಡಿದು ಬಂದಿದ್ದ ಗೂಂಡಾಗಳು ಎಂದು ರೈತರು ಆರೋಪಿಸಿದ್ದಾರೆ.
'ಅವರು ಸ್ಥಳಿಯರಲ್ಲ, ಬಾಡಿಗೆ ಗೂಂಡಾಗಳು. ಅವರುನಮ್ಮ ಮೇಲೆ, ಕಲ್ಲು ತೂರಾಟ ನಡೆಸಿ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ನಮ್ಮ ಟ್ರಾಲಿಗಳನ್ಬು ಸುಟ್ಟು ಹಾಕಲು ಅವರು ಪ್ರಯತ್ನಿಸಿದ್ದಾರೆ. ನಾವು ಅವರನ್ನು ಪ್ರತಿರೋಧಿಸಲು ಇಲ್ಲಿದ್ದೇವೆ. ಸ್ಥಳ ಬಿಟ್ಟು ತೆರಳುವುದಿಲ್ಲ ' ಎಂದು 21 ವರ್ಷದ ಹರ್ಕೀರತ್ ಮನ್ ಬೆನಿವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.