ನವದೆಹಲಿ: ಮಹಾರಾಷ್ಟ್ರ ಚುನಾವಣೆ ಮುಗಿದಿದ್ದರೂ, ಮತದಾನ ಪ್ರಕ್ರಿಯೆ ವಿಚಾರವಾಗಿ ಕಾಂಗ್ರೆಸ್ ಮತ್ತು ಚುನಾವಣಾ ಆಯೋಗದ ನಡುವೆ ಜಟಾಪಟಿ ಮುಂದುವರಿದಿದೆ.
ಮಹಾರಾಷ್ಟ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಚುನಾವಣಾ ಆಯೋಗ, ಪಕ್ಷ ಎತ್ತಿರುವ ಹಲವು ವಿಚಾರಗಳ ಕುರಿತು ಚರ್ಚೆ ನಡೆಸುವುದಕ್ಕಾಗಿ ಡಿ.3ರ ಸಂಜೆ ಬರುವಂತೆ ಕಾಂಗ್ರೆಸ್ ನಿಯೋಗಕ್ಕೆ ಶನಿವಾರ ಆಹ್ವಾನ ನೀಡಿದೆ.
ಮಹಾರಾಷ್ಟ್ರ ಚುನಾವಣೆಯಲ್ಲಿನ ಮತದಾನದ ಕುರಿತು ಕಾಂಗ್ರೆಸ್ ಪಕ್ಷ ಆಯೋಗಕ್ಕೆ ಶುಕ್ರವಾರ ಮನವಿ ಪತ್ರ ಸಲ್ಲಿಸಿ, ತನ್ನ ಆಕ್ಷೇಪ, ಕಳವಳ ವ್ಯಕ್ತಪಡಿಸಿತ್ತು. ಮನವಿ ಪತ್ರಕ್ಕೆ ಉತ್ತರ ನೀಡಿರುವ ಆಯೋಗ, ಕಾಂಗ್ರೆಸ್ ನಿಯೋಗಕ್ಕೆ ಈ ಆಹ್ವಾನ ನೀಡಿದೆ.
‘ಮತದಾನಕ್ಕೆ ಸಂಬಂಧಿಸಿ ಸ್ಥಾಪಿತ ಪ್ರಕ್ರಿಯೆ ಅನುಸರಿಸಲಾಗಿದೆ. ಆದಾಗ್ಯೂ, ಕಾಂಗ್ರೆಸ್ ಪಕ್ಷ ವ್ಯಕ್ತಪಡಿಸಿರುವ ‘ನ್ಯಾಯಯುತ ಆತಂಕ’ಗಳ ಕುರಿತು ಪರಿಶೀಲನೆ ನಡೆಸಲಾಗುವುದು’ ಎಂದು ಆಯೋಗ ಹೇಳಿದೆ.
‘ಮತದಾರರ ಪಟ್ಟಿಯಿಂದ ಹೆಸರುಗಳನ್ನು ಮನಬಂದಂತೆ ತೆಗೆದು ಹಾಕಲಾಗಿತ್ತು. ಆದಾಗ್ಯೂ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮತದಾನ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಅದರಲ್ಲೂ, ನ.20ರ ಸಂಜೆ 5ರಿಂದ ರಾತ್ರಿ 11.30ರ ವರೆಗೆ ಆಯೋಗ ಮಾಹಿತಿ ನೀಡಿದ ವೇಳೆ, ಮತಪ್ರಮಾಣದಲ್ಲಿ ‘ವಿವರಿಸಲಾಗದ’ದಷ್ಟು ಹೆಚ್ಚಳ ಕಂಡುಬಂದಿದೆ’ ಎಂದು ಕಾಂಗ್ರೆಸ್ ಮನವಿ ಪತ್ರದಲ್ಲಿ ವಿವರಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಆಯೋಗ, ‘ಡಿ.3ರ ಸಂಜೆ ಕಾಂಗ್ರೆಸ್ ನಿಯೋಗದ ಅಹವಾಲು ಆಲಿಸಿದ ನಂತರ, ವಿವರವಾದ ಉತ್ತರ ನೀಡಲಾಗುವುದು’ ಎಂದು ಹೇಳಿದೆ.
‘ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕಲಾಗಿತ್ತು, ನಂತರ ಹಲವರ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಕಾಂಗ್ರೆಸ್ ದೂರಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳೊಂದಿಗೆ ನಿಕಟ ಸಮಾಲೋಚನೆ ಬಳಿಕವೇ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ, ಅಂತಿಮಗೊಳಿಸಲಾಗುತ್ತದೆ’ ಎಂದು ಆಯೋಗ ಹೇಳಿದೆ.
‘ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಎಲ್ಲ ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತದೆ. ಪಟ್ಟಿ ಪರಿಶೀಲನೆಯ ಪ್ರತಿ ಹಂತದಲ್ಲಿಯೂ ರಾಜಕೀಯ ಪಕ್ಷಗಳನ್ನು ತೊಡಗಿಸಿಕೊಳ್ಳಲಾಗುತ್ತದೆ’ ಎಂದೂ ಹೇಳಿದೆ.
ಇವಿಎಂ: ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಲಿ–ಬಿಜೆಪಿ ಸವಾಲು
ನವದೆಹಲಿ: ‘ಚುನಾವಣಾ ಪ್ರಕ್ರಿಯೆ ಇವಿಎಂಗಳ ವಿಶ್ವಾಸಾರ್ಹತೆ ಕುರಿತು ಕಾಂಗ್ರೆಸ್ ಪದೇಪದೇ ಪ್ರಶ್ನೆ ಕೇಳುತ್ತಿದೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಚುನಾಯಿತ ಪ್ರತಿನಿಧಿಗಳು ಮೊದಲು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಮತಪತ್ರಗಳ ಬಳಕೆ ಮತ್ತೆ ಶುರುವಾದ ಮೇಲಷ್ಟೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಲಿ’ ಎಂದು ಬಿಜೆಪಿ ಶನಿವಾರ ಸವಾಲು ಹಾಕಿದೆ.
‘ರಾಜೀನಾಮೆ ನೀಡಿದರೆ ಮಾತ್ರ ತಾವು ಪ್ರತಿಪಾದಿಸುತ್ತಿರುವ ವ್ಯವಸ್ಥೆಯಲ್ಲಿ ಕಾಂಗ್ರೆಸ್ ನಾಯಕರು ಹೊಂದಿರುವ ನಂಬಿಕೆಗೆ ಮಹತ್ವ ಬರುತ್ತದೆ. ಇವಿಎಂ ಕುರಿತು ಅವರು ಮಾಡುತ್ತಿರುವ ಆರೋಪಗಳಿಗೆ ಬೆಲೆ ಇರುತ್ತದೆ’ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಇವಿಎಂಗಳು ಹಾಗೂ ಇವುಗಳನ್ನು ಬಳಸಿ ನಡೆಸುವ ಚುನಾವಣೆ ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯನ್ನು ಸುಪ್ರೀಂ ಕೋರ್ಟ್ ಹಲವಾರು ಸಂದರ್ಭಗಳಲ್ಲಿ ದೃಢೀಕರಿಸಿದೆ. ಕಾಂಗ್ರೆಸ್‌ನವರು ಈ ವಿಚಾರವಾಗಿ ಈಗಲೂ ಕೋರ್ಟ್ ಕದ ತಟ್ಟಬಹುದು’ ಎಂದು ಹೇಳಿದರು.
‘ಕಾಂಗ್ರೆಸ್‌ನ ಕೆಲ ಮುಖ್ಯಮಂತ್ರಿಗಳು ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇವಿಎಂಗಳನ್ನು ಒಳಗೊಂಡ ಚುನಾವಣಾ ಪ್ರಕ್ರಿಯೆ ಮೂಲಕವೇ ಗೆದ್ದು ಬಂದವರು. ಈ ನಾಯಕರು ಮೊದಲು ರಾಜೀನಾಮೆ ನೀಡಲಿ‘ ಎಂದರು.
‘ಲೋಕಸಭಾ ಸದಸ್ಯೆಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಮಾಣವಚನ ಸ್ವೀಕರಿಸಿದ ದಿನವೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇವಿಎಂಗಳ ಕುರಿತು ಪ್ರಶ್ನೆ ಎತ್ತಿದ್ದು ವಿಪರ್ಯಾಸ’ ಎಂದು ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.