ADVERTISEMENT

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾವ ಯತ್ನ: ಪಾಕ್‌ಗೆ ತೀವ್ರ ಮುಖಭಂಗ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 7:10 IST
Last Updated 16 ಜನವರಿ 2020, 7:10 IST
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ   

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರವಿಚಾರ ಪ್ರಸ್ತಾಪಿಸಿರುವ ಪಾಕಿಸ್ತಾನ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಆ ಮೂಲಕ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಗುರಿಯಾಗಿಸಿ ಪಾಕಿಸ್ತಾನ ಮಾಡುತ್ತಿರುವ ಆರೋಪಕ್ಕೆ ಮತ್ತೆ ಹಿನ್ನೆಡೆ ಉಂಟಾಗಿದೆ.

ಕಾಶ್ಮೀರದ ವಿಚಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಮಸ್ಯೆಯಾಗಿದ್ದು, ಅದನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಬಹುತೇಕ ಸದಸ್ಯ ರಾಷ್ಟ್ರಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಪಾಕಿಸ್ತಾನ ಮಂಡಿಸಿರುವ ವಾದದ ಪರವಾಗಿ ಕೇವಲ ಚೀನಾ ನಿಂತಿದೆ. ಅಮೆರಿಕಾ,ಇಂಗ್ಲೆಂಡ್‌ ಮತ್ತು ಪ್ರಾನ್ಸ್‌ ಸೇರಿದಂತೆ ಬಹುತೇಕ ರಾಷ್ಟ್ರಗಳು ಭಾರತದ ವಾದವನ್ನು ಒಪ್ಪಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಜಾಗತಿಕ ವೇದಿಕೆಯಲ್ಲಿ ಮುಜುಗರ ಉಂಟು ಮಾಡಿವೆ.

ADVERTISEMENT

ಪಾಕಿಸ್ತಾನವು ಭಯೋತ್ಪದಕರಿಗೆ ಆಶ್ರಯ ನೀಡುತ್ತಿರುವ ವಿಚಾರಗಳ ಮೇಲೆ ಗಮನ ಹರಿಸಿ, ನವದೆಹಲಿ ಮತ್ತು ಇಸ್ಲಾಮಾಬಾದ್‌ ಸಂಬಂಧ ಸುಧಾರಣೆಗೆ ಪ್ರಯತ್ನಿಸಲಿ ಎಂದು ಭಾರತ ಹೇಳಿದೆ.

ಈ ಬಗ್ಗೆ ಮಾತನಾಡಿರುವ, ವಿಶ್ವ ಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಆಗಿರುವ ಸಯ್ಯದ್‌ ಅಕ್ಬರುದ್ದೀನ್‌ ಅವರು, ‘ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ಪಾಕಿಸ್ತಾನದ ಪ್ರತಿನಿಧಿಗಳು ಭಾರತದ ವಿರುದ್ದ ಆಧಾರರಹಿತ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಪಾಕಿಸ್ತಾನದ ವಾದವನ್ನು ನಂಬುತ್ತಿಲ್ಲ ಎಂಬುದು ನಮಗೆ ಸಂತೋಷ ಉಂಟುಮಾಡಿದೆ’ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಯ್ಯದ್‌ ಅಕ್ಬರುದ್ದೀನ್‌ ಅವರು, ‘ಇಂದು ವಿಶ್ವ ಸಂಸ್ಥೆಯಲ್ಲಿ ನಮ್ಮ ಧ್ವಜವು ಎತ್ತರದಲ್ಲಿ ಹಾರುತ್ತಿದೆ. ಸುಳ್ಳಿನ ಧ್ವಜ ಹಾರಿಸಿದವರಿಗೆ ನಮ್ಮ ಹಲವು ಸ್ನೇಹಿತರಿಂದ ಕಟುವಾದ ಪ್ರತಿಕ್ರಿಯೆ ದೊರೆತಿದೆ‘ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.