ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ ಕೇಜ್ರಿವಾಲ್ ಅವರು 'ದಿ ಕೇಜ್ರಿವಾಲ್ ಮಾಡೆಲ್' ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ‘ರಾಜಕೀಯ ಅಡೆತಡೆಗಳಿಗೆ ಹೊರತಾಗಿಯೂ ದೆಹಲಿಯಲ್ಲಿ ನಮ್ಮ ಸರ್ಕಾರ ಪರಿಣಾಮಕಾರಿ ಆಡಳಿತ ನಡೆಸಿದ್ದು, ನೊಬೆಲ್ ಪ್ರಶಸ್ತಿಗೆ ಅರ್ಹ’ ಎಂದು ಪ್ರತಿಪಾದಿಸಿದ್ದಾರೆ. ಇದೇ ವಿಚಾರ ಇದೀಗ ಆಡಳಿತಾರೂಢ ಬಿಜೆಪಿ ಮತ್ತು ಎಎಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
‘ಅಭಿವೃದ್ಧಿ ಕೆಲಸಗಳನ್ನು ಮಾಡದಂತೆ ತಡೆಯಲ್ಪಟ್ಟಿದ್ದರೂ ಕೂಡಾ ಶಕ್ತಿ ಮೀರಿ ಉತ್ತಮ ಕೆಲಸಗಳನ್ನು ಮಾಡಿದ್ದೇವೆ. ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಮತ್ತು ಇತರರಿಂದ ತೊಂದರೆಗಳಿದ್ದರೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಕ್ಕಾಗಿ ನನಗೆ ಮತ್ತು ನಮ್ಮ ಸರ್ಕಾರಕ್ಕೆ ನೊಬೆಲ್ ಪ್ರಶಸ್ತಿ ಸಿಗಬೇಕು’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
‘ದೆಹಲಿಯಲ್ಲಿ ನಮ್ಮ ಸರ್ಕಾರ (ಎಎಪಿ) ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಆಡಳಿತ ನಡೆಸಿದೆ. ಆದರೆ, ಈಗಿನ ಬಿಜೆಪಿ ಸರ್ಕಾರ ಜನರನ್ನು ದೋಚುತ್ತಿದೆ ಎಂದು ಆರೋಪಿಸಿದ ಕೇಜ್ರಿವಾಲ್, ದೆಹಲಿಯ ಜನರು ಎಎಪಿ ಆಡಳಿತವನ್ನು ಮಿಸ್ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಹಿಂದಿನ ಸರ್ಕಾರ ಖಜಾನೆ ಖಾಲಿ ಮಾಡಿದೆ ಎಂದು ಬಿಜೆಪಿಗರು ಆರೋಪಿಸಿದ್ದರು. ಆದರೆ, ನಾವು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಸಾರ್ವಜನಿಕ ಹಣದಲ್ಲಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಉಚಿತ ವಿದ್ಯುತ್ ನೀಡಿದ್ದೇವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕೇಜ್ರಿವಾಲ್ ಅವರು ನೊಬೆಲ್ ಪ್ರಶಸ್ತಿಗೆ ಅರ್ಹರು ಎಂಬ ಹೇಳಿಕೆ ಕುರಿತು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಪ್ರತಿಕ್ರಿಯಿಸಿದ್ದು, ‘ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರು ಸ್ವ-ಪ್ರಶಂಸೆ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.
‘ಕೇಜ್ರಿವಾಲ್ ತಮಗೆ ನೊಬೆಲ್ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸುವುದು ನಗೆಪಾಟಲಿಗೆ ಈಡಾಗುವಂತಹದ್ದು. ಅಸಮರ್ಥತೆ, ಅರಾಜಕತೆ ಮತ್ತು ಭ್ರಷ್ಟಾಚಾರಕ್ಕಾಗಿ ಅವರು ಖಂಡಿತವಾಗಿಯೂ ನೊಬೆಲ್ ಪ್ರಶಸ್ತಿ ಪಡೆಯುತ್ತಿದ್ದರು’ ಎಂದು ಸಚ್‌ದೇವ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.